ಜಿಲ್ಲೆ

ಜಮ್ಮಾ ಬಂದೂಕು ಠೇವಣಿಗೆ ಬಿಜೆಪಿ ವಿರೋಧ

ಮಡಿಕೇರಿ:
ಜಿಲ್ಲಾಧಿಕಾರಿ ಅಥವಾ ಚುನಾವಣಾಧಿಕಾರಿ ಆದೇಶವಿಲ್ಲದೆ ಬಲಾತ್ಕಾರವಾಗಿ ಜಮ್ಮಾ ಹಿಡುವಳಿದಾರರ ಕೋವಿ ವಶಪಡಿಸಿಕೊಳ್ಳುತ್ತಿರುವ ಪೊಲೀಸರ ಕ್ರಮಕ್ಕೆ ಜಿಲ್ಲಾ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.

ಈ ಸಂಬಂಧ ಮಂಗಳವಾರ ಪತ್ರಿಕಾ ಹೇಳಿಜೆ ನೀಡಿರುವ ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ, ಪ್ರತಿ ಚುನಾವಣೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಚುನಾವಣಾಧಿಕಾರಿಗಳ ಆದೇಶದಂತೆ ಲೈಸೆನ್ಸ್ ಪಡೆದು ಕೋವಿ ಬಳಸಿಕೊಳ್ಳುತ್ತಿರುವವರ ಕೋವಿಯನ್ನು ಪೊಲೀಸ್ ಇಲಾಖೆ ಡಿಪಾಸಿಟ್ ರೂಪದಲ್ಲಿ ಇಟ್ಟುಕೊಳ್ಳುತ್ತಿರುವುದು ಸಾಮಾನ್ಯ ಸಂಗತಿ. ಈ ಕ್ರಮಕ್ಕೆ ಕೊಡಗಿನ ಜನತೆ ಕೂಡ ಸಹಕಾರ ನೀಡುತ್ತಾ ಬರುತಿದ್ದಾರೆ. ಆದರೆ ಜಮ್ಮಾ ಹಿಡುವಳಿದಾರರ ಕೋವಿಗಳಿಗೆ ಇದರಿಂದ ಈ ಹಿಂದಿನಿಂದಲೂ ರಿಯಾತಿ ಇತ್ತು. ಆದರೆ ಈ ಬಾರಿ ಜಿಲ್ಲಾಧಿಕಾರಿ ಅಥವಾ ಚುನಾವಣಾ ಅಧಿಕಾರಿಗಳ ಯಾವುದೇ ಆದೇಶ ಮತ್ತು ಸೂಚನೆ ಇಲ್ಲದೆ ಜಮ್ಮಾ ಹಿಡುವಳಿದಾರರ ಮನೆಗಳಿಗೆ ಪೊಲೀಸರು ತೆರಳಿ ಕೋವಿ ನೀಡುವಂತೆ ಕಿರುಕುಳ ನೀಡುತ್ತಿದಾರೆ. ಪೊಲೀಸ್ ಇಲಾಖೆಯ ಈ ಕ್ರಮದಿಂದ ಕೊಡಗಿನಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತಿದ್ದು, ಈ ಹಿಂದಿನ ಯಾವುದೇ ಚುನಾವಣೆಯ ಸಂದರ್ಭದಲ್ಲಿ ಕೊಡಗಿನಲ್ಲಿ ರಾಜಕೀಯ ಘರ್ಷಣೆಯಾದ ಉದಾಹರಣೆಗಳು ಇಲ್ಲ. ಆದರೆ ಪೊಲೀಸರ ಈ ದಿಢೀರ್ ಕ್ರಮದಿಂದ ಅನಾವಶ್ಯಕ ಕಿರುಕುಳ ಜಮ್ಮಾ ಹಿಡುವಳಿ ಕೋವಿ ಮಾಲೀಕರಿಗೆ ಆಗುತಿದೆ. ಹಾಗಾಗಿ ಈ ಕ್ರಮವನ್ನು ತಕ್ಷಣ ನಿಲ್ಲಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಮೂಲಕ ಮನವಿ ಮಾಡುತ್ತಿದ್ದೇವೆ ಎಂದು ತಿಳಿಸಿರುವ ಅವರು ಈ ಬಗ್ಗೆ ಕೊಡಗಿನ ಜಮ್ಮಾ ಹಿಡುವಳಿದಾರರ ಪರವಾಗಿ ಕೊಡಗು ಜಿಲ್ಲಾ ಬಿಜೆಪಿಯಿಂದ ರಾಜ್ಯದ ಗೃಹ ಮಂತ್ರಿ ಸೇರಿದಂತೆ ಚುನಾವಣಾ ಆಯೋಗಕ್ಕೂ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.