ಕೋಲಾರ: ದೇಶದ ಆರೋಗ್ಯ ಕಾಪಾಡುವ ಸಲುವಾಗಿ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ಕರೊನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕಿಡಾಗಿರುವ ಜನತೆಗೆ ಸಹಾಯ ಮಾಡಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಕರೆ ನೀಡಿದರು.
ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ಕರೊನಾ ಮಣಿಸಲು ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ ಕೈಗೊಂಡಿರುವ ನಿರ್ಧಾರಗಳನ್ನು ಬೆಂಬಲಿಸಿ ವೈಯಕ್ತಿಕವಾಗಿ ಹಾಗೂ ಪಕ್ಷದಿಂದ ಬಡವರು, ನಿರ್ಗತಿಕರಿಗೆ ದಿನಸಿ, ಹಣ್ಣು ತರಕಾರಿ, ಔಷಧ ವಿತರಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ವಿವಿಧ ದಾನಿಗಳಿಂದ 2500 ಮೂಟೆ ಅಕ್ಕಿ ಇನ್ನಿತರ ಸಾಮಗ್ರಿ ಸಂಗ್ರಹ ದಾಸ್ತಾನಿದೆ. ಇನ್ನೂ 10,000 ಕುಟುಂಬಕ್ಕೆ ಪಡಿತರ ವಿತರಿಸಲಾಗುವುದು. ರೈತರು ತರಕಾರಿಗಳನ್ನು ಮಾರಾಟ ಮಾಡಲಾಗದಿದ್ದಲ್ಲಿ ಪಕ್ಷದ ಕಾರ್ಯಕರ್ತರನ್ನು ಸಂಪರ್ಕಿಸಿದರೆ ಖರೀದಿಸುವ ವ್ಯವಸ್ಥೆ ಮಾಡಲಾಗುವುದು. ತೀರಾ ಬಡವರ ಪಟ್ಟಿ ಸಿದ್ಧಪಡಿಸಿ, ಅವರಿಗೂ ಪಡಿತರ ವ್ಯವಸ್ಥೆ ಮಾಡೋಣ ಎಂದರು.
ಭಾರತೀಯ ಜನಸಂಘದಿಂದ ಬಿಜೆಪಿ ಹೊರಹೊಮ್ಮಿ 40 ವರ್ಷಗಳಾಗಿದೆ. 370ನೇ ವಿಧಿ ರದ್ದತಿ, ಎನ್‌ಆರ್‌ಸಿ ನನಸಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಅನುಷ್ಠಾನ ನನಸಾಗುತ್ತಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ಮಾತನಾಡಿ, ಬಿಜೆಪಿ ತತ್ವ, ಸಿದ್ಧಾಂತದ ಮೇಲೆ 40 ವರ್ಷಗಳಿಂದ ಪ್ರಬುದ್ಧ ರಾಜಕೀಯ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಪಕ್ಷದ ಸಂಸ್ಥಾಪನಾ ದಿನದ ಅಂಗವಾಗಿ ಕರೊನಾ ವಿರುದ್ದ ಹೋರಾಡುತ್ತಿರುವ ವೈದ್ಯ ಸಿಬ್ಬಂದಿ, ಪೊಲೀಸರು, ಪೌರಕಾರ್ಮಿಕರನ್ನು ನಮ್ಮ ಕಾರ್ಯಕರ್ತರು ಭೇಟಿಯಾಗಿ ಅವರನ್ನು ಶ್ಲಾಘಿಸಿ ಪತ್ರಕ್ಕೆ ಸಹಿ ಹಾಕಿಸಿಕೊಳ್ಳುವ ಜತೆಗೆ ಪಕ್ಷದ ಎಲ್ಲ ಕಾರ್ಯಕರ್ತರು ಒಂದು ಹೊತ್ತಿನ ಊಟವನ್ನು ಸಂಕಷ್ಟದಲ್ಲಿರುವವರಿಗೆ ನೀಡಬೇಕೆಂಬ ರಾಷ್ಟ್ರೀಯ ಅಧ್ಯಕ್ಷರ ಆದೇಶವನ್ನು ಎಲ್ಲರೂ ಪಾಲಿಸಬೇಕು ಎಂದರು.
ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಓಂಶಕ್ತಿ ಚಲಪತಿ, ಪದಾಧಿಕಾರಿಗಳಾದ ವಾಸುದೇವ್, ವಿಜಯಕುಮಾರ್, ತಿಮ್ಮರಾಯಪ್ಪ, ಮಾಗೇರಿ ನಾರಾಯಣಸ್ವಾಮಿ, ಗುರುನಾಥರೆಡ್ಡಿ, ಆರ್.ಬಾಲಾಜಿ, ಸಿ.ವೆಂಕಟೇಶ್ ಇತರರಿದ್ದರು.