ಮಡಿಕೇರಿ:
ಜಿಲ್ಲೆಯಲ್ಲಿ ಈಗ ನೈಜ ಚಳಿಗಾಲ ಶುರುವಾದಂತೆ ವಾತಾವರಣ ಕಂಡು ಬರುತ್ತಿದೆ. ಶುಕ್ರವಾರದಿಂದ (ಜ.೨೬) ಈಚೆಗೆ ಬೆಳಗ್ಗಿನ ವೇಳೆಯಲ್ಲಿ ಸಹಿಸಲು ಸಾಧ್ಯವಾಗಷ್ಟು ಚಳಿ ಮೈ ನಡುಗಿಸುತ್ತಿದೆ. ಹೊತ್ತೇರುತ್ತಿದ್ದಂತೆಯೇ ಬಿಸಿಲಿನ ತಾಪ ಅಧಿಕವಾಗುತ್ತಿದ್ದು, ದೇಹವೆಲ್ಲಾ ಉರಿಯುವಂತೆ ಶಾಖದ ಅನುಭವ ಆಗುತ್ತಿದೆ. ಎಲ್‌ನಿನೋ ಪರಿಣಾಮದಿಂದ ಇಂಥ ಪರಿಸ್ಥಿತಿ ಉಂಟಾಗಿದ್ದು, ಇನ್ನೂ ೫-೧೦ದಿನ ಇದೇ ರೀತಿಯ ಸನ್ನಿವೇಶ ಇರಲಿದೆ ಎನ್ನುತ್ತಾರೆ ಹವಾಮಾನ ತಜ್ಞರು.
ಚಳಿಗಾಲದ ಅನುಭವ ಕೊಡುವ ಗಡ ಗಡ ನಡುಗಿಸುವ ಚಳಿ ಈಗ ಕಂಡು ಬರುತ್ತಿದೆ. ಕಳೆದ ೩ ದಿನಗಳಿಂದ ಶುಭ್ರ ಆಕಾಶವಿದ್ದು, ಬೆಳಗ್ಗಿನ ವಿಪರೀತ ಚಳಿ ಸಹಿಸಲಸಾಧ್ಯವಾದಷ್ಟು ಹೆಚ್ಚು ಇರುವ ಅನುಭವ ಆಗುತ್ತಿದೆ. ಸಾಮಾನ್ಯವಾಗಿ ನವೆಂಬರ್ ಮಧ್ಯ ಅಥವಾ ಕೊನೆಯಲ್ಲಿ ಆರಂಭವಾಗಬೇಕಿದ್ದ ಚಳಿಗಾಲ ಈ ಬಾರಿ ಜನವರಿ ಅಂತ್ಯಕ್ಕೆ ಕಾಣಿಸಿಕೊಂಡಂತಿದೆ. ಕಳೆದ ಕೆಲವು ದಿನಗಳಿಂದ ಇದ್ದ ಮೋಡ ಕವಿದ ಆಕಾಶ, ಮಳೆ ಮತ್ತು ಮಂಜು ಮುಸುಕಿದ ವಾತಾವರಣದ ಬದಲಾಗಿ ಹಗಲಿನ ವೇಳೆ ಒಣ ಹವೆ ಕಾಣಿಸಿಕೊಂಡಿದೆ.
ಮೋಡ ಕಡಿಮೆಯಾಗಿ ಆಕಾಶ ಶುಭ್ರವಾಗಿರುವುದರಿಂದ ಹೆಚ್ಚು ಚಳಿಯ ಅನುಭವ ಆಗುತ್ತಿದೆ ಎನ್ನುತ್ತಾರೆ ಹವಾಮಾನ ತಜ್ಞರು. ಇನ್ನೂ ೧೦ ದಿನಗಳ ಕಾಲ ಇದೇ ಮುಂದುವರಿಯಲಿದೆ. ಭಾನುವಾರ (ಜ.೨೮) ಕನಿಷ್ಠ ತಾಪಮಾನ ೧೫ ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಗರಿಷ್ಠ ತಾಪಮಾನ ೩೧ ಡಿಗ್ರಿ ಸೆಲ್ಸಿಯಸ್ ಇತ್ತು. ಸೋಮವಾರ ಬಹುತೇಕ ಇದೇ ವಾತಾವರಣ ಮುಂದುವರಿಯಲಿದ್ದು, ಮಂಗಳವಾರ ಮತ್ತು ಬುಧವಾರ ಗರಿಷ್ಠ ತಾಪಮಾನ ೩೨ ಡಿಗ್ರಿ ಇರಲಿದೆ. ಶನಿವಾರ (ಫೆ.೩) ಕನಿಷ್ಠ ತಾಪಮಾನ ೧೩ ಡಿಗ್ರಿ ಸೆಲ್ಸಿಯಸ್‌ಗೆ ಇಳಿದರೆ, ಭಾನುವಾರ (ಫೆ.೪) ಗರಿಷ್ಠ ತಾಪಮಾನ ೩೪ ಡಿಗ್ರಿ ಸೆಲ್ಸಿಯಸ್ ತನಕ ಇರಲಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.
ಚಳಿಯಿಂದಾಗಿ ಬೆಳಗ್ಗೆ ಮತ್ತು ಸಂಜೆ ಸ್ವಲ್ಪ ತೊಂದರೆ ಆಗಬಹುದಾದರೂ ಹಗಲಿನ ವಾತಾವರಣ ಕಾಫಿ ಬೆಳೆಗಾರರು ಮತ್ತು ಭತ್ತ ಕಷಿಕರಿಗೆ ಅನುಕೂಲ ಕಲ್ಪಿಸುವಂತೆ ಇದೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದಾಗಿ ನೆನೆಗುದಿಗೆ ಬಿದ್ದದ್ದ ಭತ್ತ ಕಟಾವು ಕಾರ್ಯ, ಒಕ್ಕಣಿಕೆ ಮಾಡಲು ಇದು ಸಕಾಲವಾಗಿದೆ. ಕಾಫಿ ಕೊಯ್ಲು ಕೆಲಸ ಮತ್ತು ಕಾಫಿ ಒಣಗಿಸಲು ಕೂಡ ಇದು ಸೂಕ್ತ ವಾತಾವರಣವಾಗಿದೆ. ಮಳೆ, ಮೋಡ ಕವಿದ ವಾತಾವರಣದಿಂದ ಕಂಗೆಟ್ಟಿದ್ದ ಕಾಫಿ ಬೆಳೆಗಾರರು ಮತ್ತು ಭತ್ತ ಬೆಳೆದಿದ್ದ ರೈತರು ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಮಳೆ ಮತ್ತು ಮೋಡ ಕವಿದ ವಾತಾವರಣದಿಂದಾಗಿ ಕಾಫಿ ಗಿಡಗಳಿಂದಲೂ ಕಾಯಿಗಳು ಉದುರಿ ನಷ್ಟವಾಗಿತ್ತು. ಕೊಯ್ಲು ಮಾಡಿದ್ದ ಕಾಫಿಯನ್ನು ಒಣಗಿಸಲು ಕೂಡ ಸಾಧ್ಯವಾಗಿರಲಿಲ್ಲ. ಕಾಫಿ ಗಿಡಗಳಲ್ಲಿ ಅಕಾಲಿಕ ಹೂವು ಅರಳಿ ಬೆಳೆಗಾರರು ಚಿಂತೆಗೀಡಾಗಿದ್ದರು. ಆದರೆ ಈಗ ಬದಲಾಗಿರುವ ವಾತಾವರಣದಿಂದಾಗಿ ಭತ್ತ ಕಟಾವು ಮಾಡಲು, ಒಕ್ಕಣಿಕೆಗೆ, ಕಾಫಿ ಕೊಯ್ಲು, ಒಣಗಿಸಲು ಪೂರಕ ಸನ್ನಿವೇಶ ನಿರ್ಮಾಣ ಆದಂತಾಗಿದೆ. ಹಾಗಾಗಿ ಜಿಲ್ಲೆಯ ಬೆಳೆಗಾರರ ಮುಖದಲ್ಲಿ ಈಗ ಸ್ವಲ್ಪ ನಗು ಕಾಣುವಂತಾಗಿದೆ.
ಈಗಿನ ಈ ವಾತಾವರಣ ಕಾಫಿ ಬೆಳೆಗೂ ಅನುಕೂಲ ಎನ್ನುತ್ತಾರೆ ಅನುಭವಿ ಬೆಳೆಗಾರರು. ಗಿಡಗಳಲ್ಲಿ ನೀರಿನ ಅಂಶ ಕಡಿಮೆ ಆಗುವುದರಿಂದ ಆರೋಗ್ಯವಂತ ಬೆಳವಣಿಗೆಗೆ ಸಹಕಾರಿ ಆಗುತ್ತದೆ. ಈಗಾಗಲೇ ಹೂವು ಬಿಟ್ಟಿರುವ ಗಿಡಗಳಲ್ಲಿ ಕಾಯಿ ಕಟ್ಟಲು ಇದರಿಂದ ಅನುಕೂಲಕರ ಸ್ಥಿತಿ ನಿರ್ಮಾಣ ಆಗುತ್ತದೆ. ಹಾಗಾಗಿ ಮುಂದಿನ ವರ್ಷಕ್ಕೆ ಕಾಫಿ ಫಸಲಿನ ಇಳುವರಿಯಲ್ಲಿ ಹೆಚ್ಚಳ ಕಂಡುಬರಬಹುದು ಎನ್ನುವ ನಿರೀಕ್ಷೆ ಹೊಂದಲಾಗಿದೆ. ಇನ್ನು ಫೆಬ್ರವರಿ ಅಂತ್ಯಕ್ಕೆ ಮಳೆ ಬಂದರೆ ಕಾಫಿಗೆ ಉತ್ತಮ ಎನ್ನುವುದು ಕೃಷಿಕರ ಮಾತು.
ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಹವಾಮಾನ ಬದಲಾಗುತ್ತಿದ್ದು ಋತುಮಾನಗಳು ಮುಂದಕ್ಕೆ ಹೋದಂತಹ ಅನುಭವ ಆಗುತ್ತಿದೆ. ಸಾಮಾನ್ಯವಾಗಿ ಜೂನ್‌ನಲ್ಲಿ ಶುರುವಾಗುತ್ತಿದ್ದ ಮಳೆಗಾಲ ಈ ವರ್ಷ ಆಗಸ್ಟ್‌ನಲ್ಲಿ ಆರಂಭವಾಗಿತ್ತು. ನವೆಂಬರ್‌ನಲ್ಲಿ ಕಾಲಿಡಬೇಕಿದ್ದ ಚಳಗಾಲ ಈಗ ಕಾಣಿಸಿಕೊಂಡಿದೆ. ಬೇಸಿಗೆಯ ಅವಧಿಯೂ ವಿಸ್ತರಣೆ ಆಗುವ ಸಾಧ್ಯತೆ ಕಂಡು ಬರುತ್ತಿದೆ. ಇದು ಎಲ್‌ನಿನೋ ಪರಿಣಾಮ ಎಂದು ಹವಾಮಾನ ತಜ್ಞರು ಹೇಳುತ್ತಿದ್ದು, ಪ್ರಕೃತಿಯಲ್ಲಿನ ಬದಲಾವಣೆ ಸ್ಪಷ್ಟವಾಗಿ ಗೋಚರವಾಗುತ್ತಿದೆ.
ಇನ್ನು ಸುಮಾರು ೫-೧೦ ದಿನಗಳ ಕಾಲ ಇದೇ ವಾತಾವರಣ ಇರಲಿದೆ. ಬೆಳಗ್ಗೆ ತುಂಬಾ ಚಳಿ ಇರುತ್ತದೆ. ಸೂರ್ಯ ಮೇಲೇರುತ್ತಿದ್ದಂತೆಯೇ ಬಿಸಿಲಿನ ಪ್ರಖರತೆ ಜಾಸ್ತಿಯಾಗುತ್ತದೆ. ಈ ಬಾರಿ ಬೇಸಿಗೆಯಲ್ಲೂ ಇಂಥ ತೀವ್ರ ಬಿಸಿಲು ಇರುವ ಸಾಧ್ಯತೆ ಇದೆ. ಎಲ್‌ನಿನೋ ಪರಿಣಾಮದಿಂದ ಈ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಚಳಿ ಮತ್ತು ಬಿಸಿಲು ಇದ್ದರೂ ಕಾಫಿ ಕೊಯ್ಲು ಮಾಡಲು ಇದು ಉತ್ತಮ ಸಮಯವಾಗಿದೆ. ಕೊಯ್ಲು ಮಾಡಿದ ಕಾಫಿ ಒಣಗಿಸಲು ಕೂಡ ಇದರಿಂದ ಅನುಕೂಲ ಆಗುತ್ತದೆ.