ಹುಬ್ಬಳ್ಳಿ: ಭಾರತೀಯ ಮಾನಕ ಬ್ಯೂರೋ (ಬಿಐಎಸ್) ಹುಬ್ಬಳ್ಳಿ ಶಾಖೆ ವತಿಯಿಂದ ತ್ಯಾಜ್ಯ ನಿರ್ವಹಣೆ ಮತ್ತು ಸಂಸ್ಕರಣೆ ಕುರಿತು ಮಾನಕ ಮಂಥನ ಕಾರ್ಯಕ್ರಮವನ್ನು ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ಗುರುವಾರ ಆಯೋಜಿಸಲಾಗಿತ್ತು.
ಘನ, ದ್ರವ, ವೈದ್ಯಕಿಯ, ಇಲೆಕ್ಟ್ರಾನಿಕ್ ತ್ಯಾಜ್ಯ ನಿರ್ವಹಣೆ ಪದ್ಧತಿಗಳು ಮತ್ತು ಸಂಬಂಧಿತ ಭಾರತೀಯ ಮಾನದಂಡಗಳ ಕುರಿತು ಜಾಗೃತಿ ಮೂಡಿಸಲಾಯಿತು. ತ್ಯಾಜ್ಯ ಸಂಸ್ಕರಣೆಯ ಸುಲಭ ಮಾರ್ಗಗಳ ಬಗ್ಗೆ ತಜ್ಞರು ಚರ್ಚೆ ನಡೆಸಿದರು.
ಬಿಐಎಸ್ ಹುಬ್ಬಳ್ಳಿ ಶಾಖೆ ನಿರ್ದೇಶಕ ಡಿ.ಪಿ. ಕುಮಾರ ಅವರು ಮಾತನಾಡಿ, ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು. ತ್ಯಾಜ್ಯ ನಿರ್ವಹಣೆಯ ಪ್ರಮಾಣೀಕರಣದ ಮಹತ್ವ ಮತ್ತು ಪರಿಸರ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ತಿಳಿಸಿದರು.
ಶಾಖೆ ಉಪನಿರ್ದೇಶಕ ಎಂ. ಪ್ರದಿಪಕುಮಾರ ಮಾತನಾಡಿ, ಘನ, ದ್ರವ, ವೈದ್ಯಕಿಯ ಮತ್ತು ಇಲೆಕ್ಟ್ರಾನಿಕ್ ತ್ಯಾಜ್ಯಗಳ ನಿರ್ವಹಣೆ ಮತ್ತು ಸಂಸ್ಕರಣೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ತ್ಯಾಜ್ಯ ನಿರ್ವಹಣೆಗೆ ಅನ್ವಯವಾಗುವ ಪ್ರಮುಖ ಮಾನದಂಡಗಳನ್ನು ತಿಳಿಸಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕಂಟೋನ್ಮೆಂಟ್ ಬೋರ್ಡ್ ಬೆಳಗಾವಿ, ನೌಕಾ ನೆಲೆ, ಎನ್ ಜಿಒಗಳು, ವೈದ್ಯಕಿಯ ಉದ್ಯಮ, ಉತ್ಪಾದನಾ ಕೈಗಾರಿಕೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ 40ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.
ವಿವಿಧ ಕಾಲೇಜುಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿ ಅರ್ಥಪೂರ್ಣ ಚರ್ಚೆಗೆ ವೇದಿಕೆ ಒದಗಿಸಿದರು. ಬಿಐಎಸ್ ಹುಬ್ಬಳ್ಳಿ ಶಾಖೆ ಉಪ ನಿರ್ದೇಶಕಿ ಮರ್ಸಿ ರಾಣಿ ಎಸ್. ವಂದಿಸಿದರು.