ಹುಬ್ಬಳ್ಳಿ : ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಹುಬ್ಬಳ್ಳಿ ಶಾಖೆಯ ಸಹಯೋಗದೊಂದಿಗೆ ಬಿಐಎಸ್ ಸಂವೇದನಾ ಕಾರ್ಯಕ್ರಮವನ್ನು ಸಂಸ್ಥೆಯ ಸಭಾಭವನದಲ್ಲಿ ಸೋಮವಾರದಂದು ಹಮ್ಮಿಕೊಳ್ಳಲಾಗಿತ್ತು.
ಬಿಐಎಸ್ ಮಾನದಂಡಗಳು ಮತ್ತು ಗುಣಮಟ್ಟದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬಿಐಎಸ್ ಹುಬ್ಬಳ್ಳಿ ಶಾಖೆಯ ನಿರ್ದೇಶಕ, ವಿಜ್ಞಾನಿ ಡಿ.ಪಿ. ಕುಮಾರ ಮಾತನಾಡಿ, ಇಲಾಖೆಯ ನಿರ್ದಿಷ್ಟ ಮಾನದಂಡಗಳು, ಮಾನದಂಡಗಳ ರಚನೆ, ಉತ್ಪನ್ನ ಪ್ರಮಾಣೀಕರಣ, ಹಾಲ್ವಾರ್ಕಿಂಗ್ ಮತ್ತು ಕಡ್ಡಾಯ ನೋಂದಣಿ ಯೋಜನೆ ಕುರಿತು ವಿವರಿಸಿದರು.
ಬಿಐಎಸ್ನ ನೌನ್ ಯುವರ್ ಸ್ಟ್ಯಾಂಡರ್ಡ್ಸ್ ಪೋರ್ಟಲ್ ಅನ್ನು ಪ್ರದರ್ಶಿಸಿ, ಅದರ ಮೂಲಕ ಮಾನದಂಡಗಳನ್ನು ಸುಲಭವಾಗಿ ಪತ್ತೆ ಮಾಡಬಹುದು ಮತ್ತು ಉಚಿತವಾಗಿ ಡೌನ್ಲೋಡ್ ಮಾಡಬಹುದು ಎಂದು ತಿಳಿಸಿದರು.
ಬಿಐಎಸ್ ಉಪ ನಿರ್ದೇಶಕ ಪ್ರದೀಪ ಕುಮಾರ ಹಾಗೂ ಸಹಾಯಕ ನಿರ್ದೇಶಕ ಆಸುತೋಶ ಅಗ್ರವಾಲ ಮಾತನಾಡಿ, ಗುಣಮಟ್ಟದ ಉತ್ಪನ್ನಗಳನ್ನು ತರುವಲ್ಲಿ ಬಿಐಎಸ್ನ ವಿವಿಧ ಉಪಕ್ರಮಗಳ ಕುರಿತು ವಿವರಿಸಿದರು.
ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ, ಉಪಾಧ್ಯಕ್ಷ ಪ್ರವೀಣ ಅಗಡಿ, ವೀರೇಶ ಮೊಟಗಿ, ರವೀಂದ್ರ ಬಳಿಗಾರ, ಮಹೇಂದ್ರ ಸಿಂಘಿ, ಶಶಿಧರ ಶೆಟ್ಟರ, ವಿಕ್ರಮ ಸಿರೂರ, ವಿಜಯ ಭಾರತಿ, ಎಂ.ವಿ. ಟೊಂಕದ, ವಿದ್ಯಾಧರ ಯಲಗಚ್ಛ ಹಾಗೂ ಇತರರು ಪಾಲ್ಗೊಂಡಿದ್ದರು.