ಹುಬ್ಬಳ್ಳಿ: ಜನ್ಮದಿನ ಆಚರಣೆ ನಮಗೆ ಸಂತೋಷ ತರಬೇಕಾದರೆ, ಅದು ಇನ್ನೊಬ್ಬರಿಗೆ ಅನುಕೂಲವಾಗಿರಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅಭಿಪ್ರಾಯಪಟ್ಟರು.
ಎಸ್.ಎಸ್.ಶೆಟ್ಟರ್ ಫೌಂಡೇಷನ್ ವತಿಯಿಂದ ತಮ್ಮ ಜನ್ಮ ದಿನ ನಿಮಿತ್ತ ಇಲ್ಲಿನ ಬೆಂಗೇರಿ ಖಾದಿ ಭಂಡಾರದ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಳೆದ 20 ವರ್ಷಗಳಿಂದ ಸಾವಿರಾರು ಜನರಿಗೆ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ. ಇಂತಹ ಕಾರ್ಯಕ್ರಮಗಳು ಬಡ ಜನರಿಗೆ ಅನುಕೂಲವಾಗಲಿದೆ. ಹಾಆಗಿ ಎಲ್ಲ ವಾರ್ಡ್‌ಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಶಿಬಿರಗಳಿಗೆ ಜನರಿಂದಲೂ ಉತ್ತಮ ಸ್ಪಂದನೆ ಸಿಗುತ್ತಿದೆ. ದೀನ- ದಲಿತರು, ಬಡವರಿಗೆ ಉಪಯುಕ್ತವಾಗಲಿದೆ. ವೈದ್ಯರೇ ನಿಮ್ಮ ಬಳಿ ಬಂದಾಗ ಉಚಿತವಾಗಿರುತ್ತದೆ. ನೀವಾಗಲೇ ವೈದ್ಯರ ಬಳಿ ಹೋದರೆ ಹಣ ನೀಡಬೇಕು. ಆದ್ದರಿಂದ ಸಾರ್ವಜನಿಕರು ಇಂತಹ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾಜಿ ಸಂಸದ ಪ್ರೊ. ಐ.ಜಿ. ಸನದಿ ಮಾತನಾಡಿ, ಆರೋಗ್ಯ ಸಂರಕ್ಷಣೆಗೆ ಇಂದು ದುಪ್ಪಟ್ಟು ಖರ್ಚು ಮಾಡಬೇಕಾಗಿದೆ. ಆದರೆ, ಇಂಥ ಶಿಬಿರಗಳ ಮೂಲಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಮಾತನಾಡಿ, 2003ರಿಂದಲೂ ಇಂತಹ ಶಿಬಿರ ಆಯೋಜಿಸಲಾಗುತ್ತಿದೆ. ಜಗದೀಶ ಶೆಟ್ಟರ್ ಅವರು ಲಕ್ಷಾಂತರ ಜನರಿಗೆ ದಾರಿ ದೀಪವಾಗಿದ್ದಾರೆ ಎಂದರು.
ಡಾ. ವೈಷು ವರ್ಗಿಸ್ ಹಾಗೂ ತಂಡದವರು ನೇತ್ರ ತಪಾಸಣೆ ನಡೆಸಿದರು.
ಖಲಂದರ ಮುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಶರಣಪ್ಪ ಕೊಟಗಿ, ಪಾರಸಮಲ್ ಜೈನ್, ಮಲ್ಲಿಕಾರ್ಜುನ ಸಾವಕಾರ, ಶಾಕೀರ್ ಸನದಿ, ಹೂವಪ್ಪ ದಾಯಗೋಡಿ, ಸಂದಿಲ್‌ಕುಮಾರ, ಸಂಕಲ್ಪ ಶೆಟ್ಟರ್ ಇತರರು ಇದ್ದರು.