ಜಿಲ್ಲೆ

ಜಿಲ್ಲೆಯಲ್ಲಿ ಸರ್‌ಎಂವಿ ಸ್ಮರಣೆ ಅಮರ: ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಲಿಂಗೇಗೌಡ ಅಭಿಮತ

ಮಂಡ್ಯ: ವಿಶ್ವ ಕಂಡ ಶ್ರೇಷ್ಟ ಇಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯ ಅವರನ್ನು ಜಿಲ್ಲೆ ಸದಾ ಸ್ಮರಿಸಿಕೊಳ್ಳುತ್ತದೆ ಎಂದು ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊಸಹಳ್ಳಿ ಶಿವಲಿಂಗೇಗೌಡ ಹೇಳಿದರು.

ನಗರದ ರಾಮನಹಳ್ಳಿ ಹೊಸಹಳ್ಳಿ ವೃತದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಗೆಳೆಯರ ಬಳಗ ಹಾಗೂ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿಗಳಿಂದ ಶುಕ್ರವಾರ ಆಯೋಜಿಸಿದ್ದ ಸರ್‌ಎಂವಿ ಮತ್ತು ಡಾ.ವಿಷ್ಣುವರ್ಧನ್ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೈಸೂರು ಮಹಾರಾಜರ ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿಯಲ್ಲಿ ದಿವಾನರಾಗಿ ಕಾರ್ಯ ನಿರ್ವಹಿಸಿ ಕೆಆರ್‌ಎಸ್ ನಾಲಾ ಅಭಿವೃದ್ಧಿ ಕಾಮಗಾರಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರ ತಂತ್ರಜ್ಞಾನದಿಂದ ಮತ್ತಷ್ಟು ಅಭಿವೃದ್ಧಿ ಕಾಣಲು ಸಾಧ್ಯವಾಯಿತು ಎಂದು ನುಡಿದರು.

ಗೆಳೆಯರ ಬಳಗದ ಮುಖಂಡ ಹೊಸಹಳ್ಳಿ ಶಿವು ಮಾತನಾಡಿ, ಸಿನಿಮಾ ಕ್ಷೇತ್ರದಲ್ಲಿ ವಿಷ್ಣುವರ್ಧನ್ ಅವರ ಅಭಿನಯ ಮತ್ತು ಕೊಡುಗೆಗಳು ಕನ್ನಡ ಭಾಷೆ ಬೆಳವಣಿಗೆಗೆ ಪ್ರೇರಣೆಯಾಗಿದೆ. ಇಂತಹ ಮಹಾನ್ ನಾಯಕ ನಟರ ಅಭಿಮಾನಿಗಳು ವಿಶ್ವದಾದ್ಯಂತ ಇದ್ದಾರೆ. ನಾವು ಅವರನ್ನು ಸದಾ ಸ್ಮರಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ಯುವ ಮುಖಂಡ ಶ್ರೀಕಾಂತ್, ಸಮಾಜಸೇವಕ ಶೇಖರ್, ಮಾದರಾಜೇಅರಸ್, ಸುರೇಶ್, ರೇವಣ್ಣ, ಕುಳ್ಳಪ,್ಪ ಚಂದ್ರ, ಮಧು ಇತರರಿದ್ದರು. ಇದೇ ಸಂದರ್ಭದಲ್ಲಿ ಸರ್‌ಎಂವಿ ಮತ್ತು ಡಾ.ವಿಷ್ಣುವರ್ಧನ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು. ಬಳಿಕ ಸಾರ್ವಜನಿಕರಿಗೆ ಅನ್ನದಾಸೋಹ ಆಯೋಜಿಸಲಾಗಿತ್ತು.