ಜಿಲ್ಲೆ

ಮಹಾಕವಿ ಸರ್ವಜ್ಞನ ವಚನ ಅರ್ಥಪೂರ್ಣ...

ಪ್ರಭಾಕರ್​ ಪೂಜಾರಿ ಅನಿಸಿಕೆ

ಜಯಂತಿ ಕಾರ್ಯಕ್ರಮ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಸಮಾಜದಲ್ಲಿದ್ದ ಮೂಢನಂಬಿಕೆ, ಜಾತಿ ವ್ಯವಸ್ಥೆ ಹಾಗೂ ಢಾಂಬಿಕ ಭಕ್ತಿಯನ್ನು ವಚನಗಳ ಮೂಲಕ ಕಟುವಾಗಿ ಖಂಡಿಸಿದ, ಟೀಕಿಸಿದ ಸರ್ವಜ್ಞ ಅವರ ಸಾಹಿತ್ಯ ಅರ್ಥಪೂರ್ಣವಾಗಿದೆ. ಸಮಾಜದ ಅಂಕು-ಡೊಂಕುಗಳನ್ನು ವಚನಗಳಲ್ಲಿ ಅರುಹಿದ, ಸಮ ಸಮಾಜ ಹಾಗೂ ಸಮಾನತೆ ಸಾರಿದ ಶ್ರೇಷ್ಠ ಸಂತರು ಎಂದು ನಗರಸಭಾ ಅಧ್ಯಕ್ಷ ಪ್ರಭಾಕರ್​ ಪೂಜಾರಿ ತಿಳಿಸಿದರು.

ಉಡುಪಿ ಕಡಿಯಾಳಿಯಲ್ಲಿರುವ ಯು.ಕಮಲಬಾಯಿ ಪ್ರೌಢಶಾಲೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕುಲಾಲ ಸಂಘಗಳ ಒಕ್ಕೂಟ ಉಡುಪಿ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಸರ್ವಜ್ಞ ಕವಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕುಲಾಲ ಸಂಘದ ಅಧ್ಯಕ್ಷ ಕಾಳು ಕುಲಾಲ ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಕೆ.ಗಣಪತಿ, ಸರ್ಕಾರದ ಗ್ಯಾರಂಟಿ ಯೋಜನೆಯ ಜಿಲ್ಲಾ ಉಪಾಧ್ಯಕ್ಷ ಸಂತೋಷ್​ ಕುಲಾಲ, ಕುಲಾಲ ಸಮುದಾಯದ ಪದಾಧಿಕಾರಿಗಳು, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ತೇಜಸ್​ ವಿ. ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸುದರ್ಶನ್​ ನಾಯಕ್​ ವಂದಿಸಿದರು.

ತ್ರಿಪದಿಗಳ ಮೌಲ್ಯ ಬೋಧನೆ

ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಶೇಖರ್​ ಕುಲಾಲ ಉಪನ್ಯಾಸ ನೀಡಿ, ಸರ್ವಜ್ಞ ಅವರು ಮಹಾಕವಿ. ತ್ರಿಪದಿಯ ಬ್ರಹ್ಮ ಎಂದೇ ಖ್ಯಾತರಾದವರು. ತ್ರಿಪದಿ ವಚನಗಳ ಮೂಲಕ ಸರಳವಾಗಿ ಬದುಕಿನ ಮೌಲ್ಯಗಳನ್ನು ಜನರಿಗೆ ಬೋಧಿಸಿದರು. ಸಮಾಜದಲ್ಲಿದ್ದ ಜಾತಿ ಪದ್ಧತಿ ವಿರೋಧಿಸಿದ ಅವರು, ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವಂತೆ ಹಾಗೂ ದಾನಗಳ ಮಹತ್ವವನ್ನು ಮನದಟ್ಟು ಮಾಡುವಲ್ಲಿ ಶ್ರಮಿಸಿದರು ಎಂದು ತಿಳಿಸಿದರು.

ದೇಶದ ಏಳಿಗೆಯಲ್ಲಿ ದಾರ್ಶನಿಕರು, ಸಾಹಿತಿಗಳು ಹಾಗೂ ಕವಿಗಳ ಸೇವೆ ಅಪಾರವಾಗಿದೆ. ಅವರ ಸಾಧನೆ ತಿಳಿದುಕೊಳ್ಳುವ, ಧ್ಯೇಯೋದ್ದೇಶ ಅನುಸರಿಸುವ ಮೂಲಕ ಮಹನೀಯರ ಆಶಯ ಈಡೇರಿಸಬೇಕು. ತನ್ಮೂಲಕ ನಾಡಿಗೆ ಉತ್ತಮ ಕೊಡುಗೆ ನೀಡುವಂತಾಗಬೇಕು. | ದಿನಕರ್​ ಹೆರೂರು. ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ