ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಮೈಸೂರು ರಾಜ್ಯವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡ ನಾಡಿನ ಅಭಿವೃದ್ಧಿ ಹರಿಕಾರ ಎಂದು ನವೋದಯ ವಿದ್ಯಾಲಯದ ನಿವೃತ್ತ ಪ್ರಾದ್ಯಾಪಕ ವಿ.ಎಸ್.ಹೆಗಡೆ ಬಣ್ಣಿಸಿದರು.
ನಗರದ ಎಂಎಬಿಎಲ್ ಪ್ರೌಢಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ಸಮಯದಲ್ಲಿ ನಿರ್ಮಾಣವಾದ ವಿವಿಧ ಜಲಾಶಯಗಳು, ಬೃಹತ್ ಕೈಗಾರಿಕೆಗಳು, ನೂರಾರು ಶಾಲೆಗಳು ಕನ್ನಡಿಗರ ಬದುಕನ್ನು ಉಜ್ವಲಗೊಳಿಸಿವೆ. ಏಷ್ಯಾದಲ್ಲೇ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಬೀದಿದೀಪವನ್ನು ಬೆಳಗಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜರ ಒಡೆಯರಿಗೆ ಸಲ್ಲುತ್ತದೆ ಎಂದರು.
ಮಹಾತ್ಮಗಾಂಧೀಜಿಯವರಿಂದ ರಾಜರ್ಷಿ ಬಿರುದು ಪಡೆದ ಹೆಗ್ಗಳಿಕೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪಾತ್ರರಾಗಿದ್ದಾರೆ. ಹಿಂದುಳಿದ ವರ್ಗಗಳಿಗೆ ಮೊದಲ ಬಾರಿಗೆ ಮೀಸಲಾತಿ ಕಲ್ಪಿಸಿ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗೆ ಶ್ರಮಿಸಿದ ಮಹನೀಯರನ್ನು ಕನ್ನಡಿಗರು ಎಂದಿಗೂ ಮರೆಯಲಾರರು ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಸಂಸ್ಥಾನ ವಿಶ್ವಮಾನ್ಯವಾಗಿ ಸವಾರ್ಂಗೀಣ ಪ್ರಗತಿ ಹೊಂದಲು ಕಾರಣೀಭೂತರಾದವರು. ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ ಗ್ರಾಮ ನೈರ್ಮಲ್ಯೀಕರಣ, ವೈದ್ಯಕೀಯ ಸಹಾಯ, ವಿದ್ಯಾ ಪ್ರಚಾರ, ನೀರಿನ ಸೌಕರ್ಯ ದೊರೆತವು ಎಂದರು.
ಕೃಷ್ಣರಾಜರ ಕೊಡುಗೆ ಅನನ್ಯ
ನಾಲ್ವಡಿ ಕೃಷ್ಣರಾಜ ಒಡೆಯರ ದೂರದೃಷ್ಟಿಯ ಫಲವಾಗಿ ಮೈಸೂರಿಗೆ ರಾಜ್ಯದ ಮಾದರಿ ಮೈಸೂರು ಎಂಬ ಕೀರ್ತಿ ಪ್ರಾಪ್ತವಾಯಿತು ಎಂದು ತಾಲೂಕು ಕಸಾಪದ ಕಸಬಾ ಘಟಕದ ಕೋಶಾಧ್ಯಕ್ಷ ಜಿ.ಸುರೇಶ್ ಹೇಳಿದರು.
ನೀರಾವರಿ, ಕೈಗಾರಿಕೆ, ಶಿಕ್ಷಣ ಕ್ಷೇತ್ರಗಳಲ್ಲಿ ಕೃಷ್ಣರಾಜರ ಕೊಡುಗೆ ಅನನ್ಯವಾದುದು. ಅವರು ಜಾರಿಗೆ ತಂದ ಸಾಮಾಜಿಕ ಕಾನೂನುಗಳಿಂದ ಸಮಾಜದಲ್ಲಿನ ಅನಿಷ್ಠ ಪದ್ಧತಿಗಳ ನಿರ್ಮೂಲನೆ ಸಾಧ್ಯವಾಯಿತು. ಅವರು, ಕನ್ನಡನಾಡಿನ ಸಮಗ್ರ ಅಭಿವೃದ್ಧಿಗೆ ಅಡಿಪಾಯ ಹಾಕಿದರು. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ಕೃಷ್ಣರಾಜರು ಪ್ರಾತಃಸ್ಮರಣೀಯರಾಗಿದ್ದಾರೆ. ಕೃಷ್ಣರಾಜರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಇಂದಿನ ಯುವಪೀಳಿಗೆ ಶ್ರಮಿಸಬೇಕಿದೆ ಎಂದರು.