ಜಿಲ್ಲೆ

ಮಿಮ್ಸ್‌ನಲ್ಲಿ ತ್ರಿವಳಿ ಮಕ್ಕಳ ಜನನ: ವೈದ್ಯಕೀಯ ಸಂಸ್ಥೆಯಲ್ಲಿ ವಿಶೇಷ ಪ್ರಕರಣ

ಕೆ.ಎನ್.ರಾಘವೇಂದ್ರ

ಮಂಡ್ಯ: ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಮಹಿಳೆ ಮೂವರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಕ್ಕಳು ಆರೋಗ್ಯವಂತರಾಗಿದ್ದು, ತಜ್ಞ ವೈದ್ಯರ ಶ್ರಮ ಸಾರ್ಥಕ ಎನಿಸಿದೆ. ಅಂತೆಯೇ ಸಂಸ್ಥೆಯ ಇತಿಹಾಸದಲ್ಲಿ ಮೊದಲ ಪ್ರಕರಣ ಇದಾಗಿದೆ.

ನಗರದ ತಾವರೆಗೆರೆ ನಿವಾಸಿ ವಾಸೀಂ ಪಾಷಾ ಅವರ ಪತ್ನಿ ಹೀನಾ ಕೌಸರ್ ನ.14ರಂದು ಮೂವರು ಮಕ್ಕಳಿಗೆ ಜನ್ಮ ಕೊಟ್ಟಿದ್ದಾರೆ. ಈ ಪೈಕಿ ಒಂದು ಮಗುವಿನ ಆರೋಗ್ಯದಲ್ಲಿ ಕೊಂಚ ಸಮಸ್ಯೆಯಾಗಿದ್ದ ಹಿನ್ನೆಲೆಯಲ್ಲಿ ಚಿಕಿತ್ಸೆ ಕೊಡಲಾಗಿದೆ. ಅಂತೆಯೇ 21 ದಿನದ ಬಳಿಕ ಅಂದರೆ ಬುಧವಾರ ತಾಯಿ ಮತ್ತು ಮಕ್ಕಳನ್ನು ಡಿಸ್ಚಾರ್ಜ್ ಮಾಡಲಾಯಿತು.

ವೈದ್ಯರಿಗೆ ಸವಾಲಾಗಿದ್ದ ಪ್ರಕರಣ: ವಾಸೀಂ ಪಾಷಾ ಮತ್ತು ಹೀನಾ ಕೌಸರ್ ದಂಪತಿಗೆ ಮದುವೆಯಾಗಿ ಎರಡು ವರ್ಷವಾಗಿದ್ದು, ಮಕ್ಕಳಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಿಮ್ಸ್‌ನ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯ ಡಾ.ಮನೋಹರ್ ಬಳಿ ದಂಪತಿ ಸಮಾಲೋಚನೆ ನಡೆಸಿ ಚಿಕಿತ್ಸೆ ಪಡೆದುಕೊಂಡರು. ಬಳಿಕ ಹೀನಾ ಕೌಸರ್ ಗರ್ಭಿಣಿಯಾಗಿದ್ದು, ಸ್ಕಾೃನಿಂಗ್ ನಡೆಸಿದಾಗ ಮೂವರು ಮಕ್ಕಳಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಮೂವರು ಮಕ್ಕಳನ್ನು ಆರೋಗ್ಯವಂತರಾಗಿ ಉಳಿಸಿಕೊಳ್ಳುವ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದರು. ಆದಾಗ್ಯೂ ದಂಪತಿ ಎಲ್ಲ ಮಕ್ಕಳನ್ನು ನೋಡಿಕೊಳ್ಳುವುದಾಗಿ ತಿಳಿಸಿದ್ದರು.

ಇದಾದ ಬಳಿಕ ಡಾ.ಮನೋಹರ್ ಹಾಗೂ ಡಾ.ಸಂಧ್ಯಾ ನೇತೃತ್ವದ ತಂಡ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಚಿಕಿತ್ಸೆ ಮುಂದುವರೆಸಿದರು. ಸಾಮಾನ್ಯವಾಗಿ ಗರ್ಭಿಣಿಯರಿಗೆ ತಿಂಗಳಿಗೊಮ್ಮೆ ಸ್ಕಾೃನಿಂಗ್ ಮಾಡಿಸಲಾಗುತ್ತದೆ. ಆದರೆ ಈ ಪ್ರಕರಣಕ್ಕೆ ಪ್ರತಿ ಹದಿನೈದು ದಿನಕ್ಕೊಮ್ಮೆ ಸ್ಕಾೃನಿಂಗ್ ಹಾಗೂ ತಪಾಸಣೆ ಮಾಡಿಕೊಂಡು ಬರಲಾಯಿತು. ಇದಲ್ಲದೆ ತ್ರಿವಳಿ ಮಕ್ಕಳಿದ್ದರೆ 32 ವಾರಕ್ಕೂ ಮುನ್ನವೇ ಹೆರಿಗೆ ಆಗುವ ಸಾಧ್ಯತೆ ಹೆಚ್ಚು. ಮಾತ್ರವಲ್ಲದೆ ತಾಯಿಗೆ ರಕ್ತಸ್ರಾವ ಹಾಗೂ ಬಿಪಿ ಬರಬಹುದು. ಈ ಹಿನ್ನೆಲೆಯಲ್ಲಿ ವೈದ್ಯರು ಮುನ್ನೆಚ್ಚರಿಕೆ ವಹಿಸಿದ್ದರು. ಅದರಂತೆ ಹೀನಾ ಕೌಸರ್‌ಗೆ 13ನೇ ವಾರ ಆದಾಗಲೇ ಗರ್ಭನಾಳದ ಹೊಲಿಗೆ ಹಾಕಿದ್ದರು.

ಆದರೆ ವೈದ್ಯರ ಶ್ರಮ ಹಾಗೂ ದಂಪತಿಯ ಎಚ್ಚರಿಕೆಯಿಂದಾಗಿ ಯಾವುದೇ ತೊಂದರೆಯಿಲ್ಲದಂತೆ ಸಿಸೇರಿಯನ್ ಆಗಿದೆ. ನ.14ರಂದು ಮಧ್ಯಾಹ್ನ 12.15ಕ್ಕೆ 1.86 ಕೆ.ಜಿ ತೂಕದ ಒಂದು ಮಗು ಹಾಗೂ 12.16ಕ್ಕೆ 1.7 ಕೆ.ಜಿ ಮತ್ತು 1.9 ಕೆ.ಜಿ ತೂಕದ ಎರಡು ಮಕ್ಕಳ ಜನನವಾಗಿದೆ. ಇದರ ಬಳಿಕ ಮಕ್ಕಳ ತಜ್ಞ ವೈದ್ಯರಾದ ಡಾ.ಕೀರ್ತಿ, ಡಾ.ಶ್ರೀಧರ್, ಡಾ.ಉಷಾ, ಶುಶ್ರೂಷಕರಾದ ನಾಗರತ್ನ, ಮೂರ್ತಿ ಮೂವರು ಮಕ್ಕಳನ್ನು ಚೆನ್ನಾಗಿ ಆರೈಕೆ ಮಾಡಿದರು. ಪ್ರತಿ ಹಂತದಲ್ಲಿಯೂ ನಿಗಾ ವಹಿಸಿದರು. ವಾಸೀಂ ಪಾಷಾ ಮತ್ತು ಹೀನಾ ಕೌಸರ್ ದಂಪತಿ ಪ್ರಕರಣದಲ್ಲಿ ಶ್ರಮ ವಹಿಸಿದ ವೈದ್ಯರನ್ನು ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ ಮತ್ತು ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಅಭಿನಂದಿಸಿದರು.

10 ಸಾವಿರಕ್ಕೊಂದು ಕೇಸ್

ಇಂದಿನ ಪೀಳಿಗೆಯಲ್ಲಿ ಒಂದು ಮಗುವಾಗುವುದು ಕಷ್ಟವಾಗುತ್ತಿದೆ. ಕಾರಣ, ಆಧುನಿಕತೆ ಪ್ರಭಾವ, ಆಹಾರ ಪದ್ಧತಿ, ಜೀವನ ಶೈಲಿ. ಇದರಿಂದಾಗಿ ಐವಿಎಫ್ ಕಡೆಗೆ ಹೋಗಬೇಕಾದ ಅನಿವಾರ್ಯತೆ ಇದೆ. ಇಂತಹ ಪ್ರಕರಣದ ನಡುವೆ ಆರೋಗ್ಯವಂತ ಮೂವರು ಮಕ್ಕಳ ಜನನವಾಗಿದೆ. ಇದು ಪ್ರತಿ ಹತ್ತು ಸಾವಿರಕ್ಕೆ ಒಂದು ಪ್ರಕರಣದಂತೆ ನೋಡಬಹುದು.