ಬೀರೂರು: ಈ ಮನೆಯ ಕರೊನಾ ಸೋಂಕಿತ ಗರ್ಭಿಣಿ ಬುಧವಾರ ರಾತ್ರಿ ಚಿಕ್ಕಮಗಳೂರು ಕೋವಿಡ್ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದರಿಂದ ಖುಷಿ ಇಮ್ಮಡಿಯಾಗಿತ್ತು. ಆದರೆ ಈ ಸಂತಸ, ಸಂಭ್ರಮ ಬೆಳಗಾಗುವ ವೇಳೆಗೆ ಮರೆಯಾಯಿತು. ಗುರುವಾರ ಗರ್ಭಿಣಿಯ ತಾಯಿ ಶಿವಮೊಗ್ಗದ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟ ಕಾರಣ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿತು.
ಹಳೇಪೇಟೆ ಮನೆಯೊಂದರ ಕರೊನಾ ಸೋಂಕಿತೆ ಗರ್ಭಿಣಿ ಚಿಕ್ಕಮಗಳೂರು ಕರೊನಾ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂಬ ವಿಷಯ ಕೇಳಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿತ್ತು.
ಬುಧವಾರ ಗರ್ಭಿಣಿ ನಿಯಮಿತ ತಪಾಸಣೆಗೆ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಕೆಮ್ಮು ಇದ್ದುದರಿಂದ ಕರೊನಾ ಪರೀಕ್ಷೆಗೆ ಒಳಪಡುವಂತೆ ವೈದ್ಯರು ಸೂಚಿಸಿದ್ದರು. ಗರ್ಭಿಣಿಗೆ ಪ್ರಸವದ ದಿನಾಂಕ ಗುರುವಾರವೇ ಇದ್ದುದರಿಂದ ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಸಿದ ರ್ಯಾಪಿಡ್ ಪರೀಕ್ಷೆಯಲ್ಲಿ ಕರೊನಾ ದೃಢಪಟ್ಟು ಆಕೆಯನ್ನು ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ರಾತ್ರಿಯೇ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಇದಕ್ಕೂ ಮೂರು ದಿನ ಮೊದಲು ಸೋಂಕಿತಳ ತಾಯಿ ಕೆಮ್ಮು, ಕಫ ಕಾರಣಕ್ಕೆ ಶಿವಮೊಗ್ಗ ಆಸ್ಪತ್ರೆಗೆ ದಾಖಲಾಗಿದ್ದು, ವರದಿ ಪಾಸಿಟವ್ ಬಂದಿತ್ತು. ಹೀಗಾಗಿ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಗಳು ಮಗುವಿಗೆ ಜನ್ಮ ನೀಡಿದ ವಿಷಯ ತಿಳಿದು ಸಂತಸ ವ್ಯಕ್ತಪಡಿಸಿದ್ದ ತಾಯಿ ಗುರುವಾರ ಬೆಳಗ್ಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಗರ್ಭಿಣಿ ಜತೆಗಿದ್ದ ಚಿಕ್ಕಪ್ಪನ ಮಗ ಮತ್ತು ತಂಗಿಯನ್ನು ಹೋಮ್ ಕ್ವಾರಂಟೈನ್ ಮಾಡಿ ಬೀದಿಯನ್ನು ಸೀಲ್ಡೌನ್ ಮಾಡಲಾಗಿದೆ. ಪುರಸಭೆ ಸಿಬ್ಬಂದಿ ಬೀದಿಯನ್ನು ಸ್ಯಾನಿಟೈಸ್ ಮಾಡಿ ಶುಚಿಗೊಳಿಸಿದ್ದಾರೆ.