ವಿಜಯವಾಣಿ ಸುದ್ದಿಜಾಲ ಉಡುಪಿ
ಶರಣರ ವಚನ ಸಂಗ್ರಹಿಸುತ್ತ ತಮ್ಮ ಜೀವನವನ್ನೇ ಬಸವಾದಿ ಶರಣರ ವಚನಗಳ ಪ್ರಚಾರಕ್ಕಾಗಿ ಮುಡಿಪಾಗಿಟ್ಟು, ವಚನಗಳ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಿದ ಡಾ. ಫ.ಗು. ಹಳಕಟ್ಟಿ ಅವರು ವಚನ ಸಂಶೋಧನಾ ಪಿತಾಮಹರಾಗಿದ್ದಾರೆ. ಅವರಿಂದಾಗಿ ಅನೇಕ ವಚನಗಳನ್ನು ಇಂದಿಗೂ ಉಳಿದಿದ್ದು, ಯುವಸಮುದಾಯ ವಚನಗಳ ಮೌಲ್ಯ ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್. ಕರೆ ನೀಡಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ. ಫ.ಗು. ಹಳಕಟ್ಟಿ ಜನ್ಮದಿನ, ವಚನ ಸಾಹಿತ್ಯ ಸಂರಕ್ಷಣಾ ದಿನ ಉದ್ಘಾಟಿಸಿ ಮಾತನಾಡಿದರು.
ಡಾ. ಹಳಕಟ್ಟಿ ಅವರು ಪತ್ರಿಕೋದ್ಯಮ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ವಚನ ಸಂರಕ್ಷಣೆ ಕಾರ್ಯದಿಂದಾಗಿ ನಾಡಿನ ಶರಣರ ವಚನಗಳು ನಮಗೆ ಲಭ್ಯ ಇರುವಂತಾಗಿದೆ. ಅವರ ಮಾರ್ಗದರ್ಶನ ಹಾಗೂ ಆಶಯದಂತೆ ನಾವೆಲ್ಲರೂ ಸಾಗೋಣ ಎಂದರು.
ಉಪನ್ಯಾಸ
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ಡಾ. ಫ.ಗು. ಹಳಕಟ್ಟಿ ಅವರ ಕುರಿತು ಉಪನ್ಯಾಸ ನೀಡಿ, ವಚನ ಸಾಹಿತ್ಯ ಸಂಗ್ರಹದ ಮೂಲಕ ವ್ಯಕ್ತಿತ್ವ ವಿಕಸನ ಹಾಗೂ ಸಮಾಜಕ್ಕೆ ಅವರು ಉತ್ತಮ ಕೊಡುಗೆ ನೀಡಿದ್ದಾರೆ. ಹಳ್ಳಿ ಹಳ್ಳಿಗಳನ್ನು ಸುತ್ತಿ ತಾಳೆಎಲೆಯಲ್ಲಿ ಬರೆದ ವಚನ ಸಾಹಿತ್ಯ ಸಂಗ್ರಹಿಸಿ, ತಮ್ಮ ಸ್ವಂತ ಹಣದಿಂದ ಮುದ್ರಿಸಿದ್ದಾರೆ. ಜೀವನದ ಕೊನೆಯವರೆಗೂ ಬಡತನ, ಅನಾರೋಗ್ಯದಲ್ಲಿಯೇ ಇದ್ದರೂ ಸಹ ವಚನ ಸಾಹಿತ್ಯ ಸಂಗ್ರಹಿಸಿ, ವಿಶ್ಲೇಶಿಸಿ, ವರ್ಗೀಕರಿಸಿ ಅಜ್ಞಾತವಾಗಿ ಉಳಿದಿದ್ದ ಕನ್ನಡದ ಅಮೂಲ್ಯ ವಚನ ಗ್ರಂಥಗಳನ್ನು ವಿಶ್ವಕ್ಕೇ ಅವರು ಪರಿಚಯಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ನಿರಂಜನ್, ಜನಪದ ವಿದ್ಯಾಂಸ ಪ್ರೊ. ಕೃಷ್ಣಯ್ಯ, ಕನ್ನಡ ರಕ್ಷಣಾ ವೇದಿಕೆಯ ಉಪಾಧ್ಯಕ್ಷ ಪ್ರಭಾಕರ ಪೂಜಾರಿ, ಕಾರ್ಮಿಕ ಅಧಿಕಾರಿ ಕುಮಾರ್, ಜಿಲ್ಲಾ ಕಸಾಪ ಕಾರ್ಯದರ್ಶಿ ನರಸಿಂಹಮೂರ್ತಿ, ಜಿಲ್ಲಾಡಳಿತದ ಸಿಬ್ಬಂದಿ ಇತರರಿದ್ದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು. ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ವಂದಿಸಿದರು.