ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ.
ಸಂತ, ಶರಣರ ವಿಚಾರ ಹಾಗೂ ಸಾಧನೆಗಳನ್ನು ಪ್ರತಿಯೊಬ್ಬ ಯುವಕರು ಅಳವಡಿಸಿಕೊಂಡು ಮುಂದಿನ ಯುವ ಪೀಳಿಗೆಗೆ ಪರಿಚಯಿಸಲು ಮುಂದಾಗಬೇಕು ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರರ 851ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಬಸವಣ್ಣ ಹಾಗೂ ಸಿದ್ದರಾಮೇಶ್ವರ ಶಿವಯೋಗಿಗಳು ಶ್ರೇಷ್ಠ ವಚನಕಾರರಾಗಿದ್ದಾರೆ. ಬಸವಣ್ಣ ಸಾಮಾಜಿಕವಾಗಿ ಹೆಚ್ಚು ಒತ್ತು ಕೊಟ್ಟಿದ್ದು, ಸಿದ್ದರಾಮೇಶ್ವರರು ಸಮಾಜ ಸೇವೆಯಲ್ಲಿ ತೃಪ್ತಿ ಪಡೆಯುತ್ತಿದ್ದರು. ಆಧ್ಯಾತ್ಮ ಪರಂಪರೆ ಹೊಂದಿರುವ ದೇಶದಲ್ಲಿ ದಿವ್ಯಜ್ಞಾನಿಗಳನ್ನು ಮುಂದಿನ ಜನಾಂಗಕ್ಕೆ ಪರಿಚಯಿಸಲು ಅವರ ಚಿಂತನೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂದರು.
ಸಮುದಾಯದ ಮುಖಂಡ ಮುನಿಯಪ್ಪ ಮಾತನಾಡಿ, 12ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಗಮನಾರ್ಹ. ಅಸಮಾನತೆ, ವರ್ಣ, ಜಾತಿ, ಲಿಂಗಭೇದ ತೊಡೆದು ಹಾಕುವ ಕೆಲಸವನ್ನು ವಚನಗಳ ಮೂಲಕ ಮಾಡಿದ್ದಾರೆ. ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪದ ಮೂರನೇ ಅಧ್ಯಕ್ಷರಾಗಿ ಸಮಾಜದಲ್ಲಿ ಕೆಲಸ ಮಾಡಿದ್ದಾರೆ ಎಂದರು.