ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಜ್ಯದ ನೆರೆ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ಹಕ್ಕಿಜ್ವರ ಕಂಡುಬಂದಿದೆ ಜತೆಗೆ ಗ್ರಾಮಾಂತರ ಜಿಲ್ಲೆಯ ಪಕ್ಕದ ಜಿಲ್ಲೆಯಾದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋಳಿಗಳು ಅನುಮಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ಮೂಲಕ ಮನವಿ ಮಾಡಿರುವ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಯಾವುದೇ ಪಕ್ಷಿಗಳು ಅಥವಾ ಕೋಳಿಗಳು ಅನುಮಾನಾಸ್ಪದವಾಗಿ ಅಸಹಜವಾಗಿ ಇಲ್ಲವೇ ಇದ್ದಕ್ಕಿದ್ದಂತೆ ಸಾವನ್ನಪ್ಪುವುದು ಕಂಡುಬಂದಲ್ಲಿ ಹತ್ತಿರದ ಪಶು ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.
ಮಾಸ್ಕ್ ಧರಿಸಿ: ಗ್ರಾಮಗಳಲ್ಲಿ ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಹಕ್ಕಿ ಜ್ವರದ (ಎಚ್5ಎನ್1) ಬಗ್ಗೆ ಆರೋಗ್ಯ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಕೋಳಿ ಸಾಕಾಣಿಕೆ ಕೇಂದ್ರಗಳನ್ನು ಗುರುತಿಸಿ ಮಾಲೀಕರು ಮತ್ತು ಸಿಬ್ಬಂದಿಗೆ ಅಗತ್ಯ ಮಾಹಿತಿ ನೀಡಲು ಕ್ರಮವಹಿಸಲಾಗಿದೆ. ಸಾರ್ವಜನಿಕರು ಭೀತಿಗೊಳ್ಳದೆ ಎಚ್ಚರದಿಂದ ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ ಸೇವಿಸಬೇಕು. ಕೈಗಳನ್ನು ಸಾಬೂನಿನಿಂದ ಆಗಾಗ್ಗೆ ಚೆನ್ನಾಗಿ ತೊಳೆದುಕೊಳ್ಳುವುದು, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಇತರೆಡೆ ಕಡ್ಡಾಯವಾಗಿ ಮಾಸ್ಕ್ ಧರಿಸಿ ಮುನ್ನೆಚ್ಚರಿಕೆಯಿಂದ ಇರಲು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಾಗೃತಿ ಮೂಡಿಸಬೇಕು: ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ಕಂಡು ಬರುತ್ತಿರುವ ಹಕ್ಕಿ ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಕೋಳಿ ಸಾಕಾಣಿಕೆ ಮಾಲಿಕರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಕ್ತ ನಿರ್ದೇಶನ ನೀಡುವಂತೆ ಜಿಲ್ಲಾ ಪಂಚಾಯತಿ ಸಿಇಒ ಡಾ. ಕೆ.ಎನ್. ಅನುರಾಧಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಸಂಬಂಧ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ವಿಶೇಷ ಸಭೆಯಲ್ಲಿ ಮಾತನಾಡಿದ್ದಾರೆ. ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಜಗದೀಶ್, ಜಿಲ್ಲಾ ಆರೋಗ್ಯಾಧಿಕಾರಿ ಲಕ್ಕಾ ಕೃಷ್ಣ ರೆಡ್ಡಿ, ತಾಲೂಕು ಪಶುವೈದ್ಯಾಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ಹಕ್ಕಿಜ್ವರ ನಿಯಂತ್ರಣದ ಬಗ್ಗೆ ಚರ್ಚೆ ನಡೆಸಲಾಗಿದೆ. ಜಿಲ್ಲೆಯಲ್ಲಿ 383 ರೈತರು ಸುಮಾರು 95 ಲಕ್ಷ ಕೋಳಿಗಳನ್ನು ಸಾಕಾಣಿಕೆ ಮಾಡುತ್ತಿದ್ದು, ವಾಡಿಕೆಯ ಕಣ್ಗಾವಲು (ಪರಿಶೀಲನೆ) ಮಾಡಿದಾಗ ಯಾವುದೇ ಹಕ್ಕಿ ಜ್ವರದ ಪ್ರಕರಣಗಳು ಇದುವರೆಗೂ ಕಂಡುಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಕ್ಕಿ ಜ್ವರ ಸೋಂಕು ತಗುಲಿದ ಹಕ್ಕಿಗಳ ರೆಕ್ಕೆಗಳು, ನೀರು, ಮೊಟ್ಟೆ, ಪಂಜರ ಮತ್ತು ಇತರೆ ಸಂಬಂಧಿಸಿದ ವಸ್ತುಗಳಿಂದ ಹರಡುತ್ತದೆ. ಹಕ್ಕಿಗಳ ಚಟುವಟಿಕೆ ಮತ್ತು ಆಹಾರ ಸೇವನೆ ಕಡಿಮೆಯಾಗುವುದು ಉಸಿರಾಡುವಾಗ ಶಬ್ದ, ಚರ್ಮ ನೀಲಿ ಬಣ್ಣಕ್ಕೆ ತಿರುಗುವುದು, ಅತೀ ಬೇಧಿ ಮತ್ತು ಹಕ್ಕಿಗಳು ಪೂರ್ವ ಚಿಹ್ನೆಗಳಿಲ್ಲದೆ ಸಾಯುವುದು ಪ್ರಮುಖ ಲಕ್ಷಣಗಳಾಗಿವೆ. ಯಾವುದೇ ಪಕ್ಷಿಗಳು ಅಥವಾ ಕೋಳಿಗಳು ಅನುಮಾನಾಸ್ಪದವಾಗಿ, ಅಸಹಜವಾಗಿ ಇಲ್ಲವೇ ಇದ್ದಕ್ಕಿದ್ದಂತೆ ಸಾವುಗಳು ಕಂಡು ಬಂದಲ್ಲಿ ಹತ್ತಿರದ ಪಶು ಸಂಗೋಪನಾ ಇಲಾಖೆಗೆ ಮಾಹಿತಿ ನೀಡಬೇಕು ಎಂದರು.
ಹಕ್ಕಿ ಜ್ವರ ಕಂಡು ಬಂದ ಸ್ಥಳದಿಂದ 10 ಕೀ.ಮಿ ಸುತ್ತಲಿನ ಗ್ರಾಮಗಳಲ್ಲಿ ಶೀತ ಅಥವಾ ಕೆಮ್ಮು ಮಾದರಿಯ ಪ್ರಕರಣಗಳು, ಜ್ವರ ಪ್ರಕರಣಗಳು, ತಲೆನೋವು, ಸ್ನಾಯುಗಳ ನೋವು, ಗಂಟಲು ನೋವು ಇತರೆ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಮಾಹಿತಿ ನೀಡಿ ಚಿಕಿತ್ಸೆ ಪಡೆಯಬೇಕು. ಹಕ್ಕಿ ಜ್ವರ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಮುಂಜಾಗ್ರತಾ ಕ್ರಮಕ್ಕೆ ಸಿಬ್ಬಂದಿಯನ್ನು ಅಣಿಗೊಳಿಸಲಾಗಿದೆ.
ಬಿ.ಎ.ಬಸವರಾಜು, ಜಿಲ್ಲಾಧಿಕಾರಿ
ಹಕ್ಕಿ ಜ್ವರ ನಿಯಂತ್ರಣಕ್ಕಾಗಿ ಪ್ರತೀ ತಾಲೂಕಿನಲ್ಲಿ ಆರ್‌ಆರ್‌ಟಿ (ಕ್ಷಿಪ್ರ ಪ್ರತಿಕ್ರಿಯೆ ತಂಡ) ರಚಿಸಿದ್ದು, ಜಿಲ್ಲೆಯಲ್ಲಿ 39 ಆರ್‌ಆರ್‌ಟಿ ಸನ್ನದ್ಧವಾಗಿದೆ. ಪ್ರತಿ ತಂಡದಲ್ಲಿ ಪಶು ವೈದ್ಯಾಧಿಕಾರಿ, ಅರೇ ತಾಂತ್ರಿಕ ಸಿಬ್ಬಂದಿ ಹಾಗೂ ಡಿ ದರ್ಜೆ ನೌಕರರು ಇರುತ್ತಾರೆ. ಮುಖ್ಯವಾಗಿ ಕೋಳಿ ಫಾರ್ಮ್‌ಗಳಿಗೆ ಹೊರಗಿನ ಪ್ರದೇಶದಿಂದ ಬರುವ ಜನರನ್ನು ಮತ್ತು ವಾಹನಗಳನ್ನು ತಾತ್ಕಾಲಿಕವಾಗಿ ಒಳಗೆ ಪ್ರವೇಶಿಸದಂತೆ ನೋಡಿಕೊಳ್ಳುವ ಕಾರ್ಯ ಮಾಡಲಾಗುತ್ತಿದೆ.
ಡಾ.ಕೆ.ಎನ್.ಅನುರಾಧಾ, ಜಿಪಂ ಸಿಇಒ