ಮಂಗಳೂರು : ಮಂಗಳೂರಿನ ಸಂತ ಅಲೋಶಿಯಸ್ ಸಂಸ್ಥೆಯಲ್ಲಿ ಮೂರು ದಿನಗಳ ಕಾಲ ಕ್ಯಾಂಪಸ್ ಬರ್ಡ್ ಕೌಂಟ್ ನಡೆಯಿತು.
144 ವರ್ಷ ಹಳೆಯದಾದ ಈ ಕಾಲೇಜಿನ 37 ಎಕರೆ ಜಾಗದ ಕ್ಯಾಂಪಸ್ ನಗರದ ಹೃದಯಭಾಗದಲ್ಲಿದೆ. ಹೆಚ್ಚುವರಿಯಾಗಿ ಕೋಟೆಕಾರ್ ಬೀರಿ ಬಳಿ 17 ಎಕರೆ ಜಾಗದಲ್ಲಿ ಸೈಂಟ್ ಅಲೋಶಿಯಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಅಂಡ್ ಇನ್ಫಾರ್ಮೇಷನ್ ಟೆಕ್ನಾಲಜಿ(ಎಐಎಂಐಟಿ)ಯ ಕ್ಯಾಂಪಸ್‌ನಲ್ಲಿ ಪಕ್ಷಿಗಳ ಎಣಿಕೆ ನಡೆಸಲಾಯಿತು.
35 ವಿದ್ಯಾರ್ಥಿಗಳ ತಂಡದೊಂದಿಗೆ ಸಹಾಯಕ ಪ್ರಾಧ್ಯಾಪಕರಾದ ಗ್ಲಾವಿನ್ ಥಾಮಸ್ ರಾಡ್ರಿಗಸ್, ಕಿರಣ್ ವಾಟಿ ಕೆ , ಡಾ. ಹೇಮಚಂದ್ರ ಇವರ ಮಾರ್ಗದರ್ಶನದಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಅಧ್ಯಾಪಕರಾದ ಹರಿಪ್ರಸಾದ್ ಶೆಟ್ಟಿ, ಸವಿಯಾ ಡಿಸೋಜಾ ಮತ್ತು ಮಿಚೆಲ್ ರಾಡ್ರಿಗಸ್ ಹಕ್ಕಿಗಳನ್ನು ದಾಖಲಿಸುವ ಕಾರ್ಯಾಚರಣೆ ನಡೆಸಿದರು.
ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಅಭಯಾರಣ್ಯದಲ್ಲಿ 36 ಜಾತಿಗಳ ಮತ್ತು ಕೋಟೆಕಾರ್ ಬೀರಿ ಬಳಿಯ ಎಐಎಂಐಟಿ ಕ್ಯಾಂಪಸ್‌ನಲ್ಲಿ 71 ಜಾತಿಗಳ ಆಕರ್ಷಕ ಹಕ್ಕಿಗಳನ್ನು ಗುರುತಿಸಿತು.
ಕ್ಯಾಂಪಸ್ ಬರ್ಡ್ ಕೌಂಟ್ ಭಾರತದಾದ್ಯಂತ ಅನೇಕ ಕ್ಯಾಂಪಸ್‌ಗಳಲ್ಲಿ ಪಕ್ಷಿಸಂಕುಲವನ್ನು ದಾಖಲಿಸುವ ಸಂಘಟಿತ ಪ್ರಯತ್ನವಾಗಿದೆ. ಇದು ಇಬರ್ಡ್ ಸಹಯೋಗದೊಂದಿಗೆ ಬರ್ಡ್ ಕೌಂಟ್ ಇಂಡಿಯಾ ಆಯೋಜಿಸಿರುವ ಕಾರ್ಯಕ್ರಮದ ಒಂದು ಭಾಗವಾಗಿದೆ, ಇಲ್ಲಿ ಹಲವಾರು ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು, ಕಾರ್ಪೊರೇಟ್ ಕ್ಯಾಂಪಸ್‌ಗಳು ವರ್ಷಂಪ್ರತಿ ಫೆಬ್ರವರಿ ತಿಂಗಳಲ್ಲಿ ಪಕ್ಷಿಗಳನ್ನು ದಾಖಲಿಸುವ ಈ ಅಭಿಯಾನದಲ್ಲಿ ಭಾಗವಹಿಸುತ್ತವೆ ಎಂದು ಪ್ರಕಟಣೆ ತಿಳಿಸಿದೆ.