ಬಸವನಬಾಗೇವಾಡಿ: ತಾಲೂಕಿನ ಇವಣಗಿ ಗ್ರಾಮದಲ್ಲಿ 10ನೇ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮನಗೂಳಿ ಗ್ರಾಮದ ಹಿರಿಯ ಸಾಹಿತಿ ಹಾಗೂ ಶಿಕ್ಷಕ ಸಿದ್ಧರಾಮ ಈರಗೊಂಡಪ್ಪ ಬಿರಾದಾರ ಆಯ್ಕೆಯಾಗಿದ್ದಾರೆ.
ಬುಧವಾರ ಸಂಜೆ ಪಟ್ಟಣದ ಬಸವೇಶ್ವರ ದೇವಸ್ಥಾನದ ಒಳ ಆವರಣದಲ್ಲಿರುವ ತಾಲೂಕು ಪರಿಷತ್ ಕಾರ್ಯಾಲಯದಲ್ಲಿ ಜರುಗಿದ ಆಯ್ಕೆ ಸಮಿತಿಯಲ್ಲಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸರ್ವಾಧ್ಯಕ್ಷ ಸ್ಥಾನಕ್ಕೆ ಬಂದಿರುವ ಎಂಟು ಅರ್ಜಿಗಳನ್ನು ಆಯ್ಕೆ ಸಮಿತಿ ಪರಿಗಣಿಸಿ, ಪರಿಶೀಲನೆ ಮಾಡಿ ಅಂತಿಮವಾಗಿ ಇವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಅರ್ಜಿಸಲ್ಲಿಸಿದ ಉಳಿದ ಎಂಟು ಜನ ಸಾಹಿತಿಗಳು ಅರ್ಹರಾಗಿದ್ದರೂ ಸಹ ಅಂತಿಮವಾಗಿ ಒಬ್ಬರನ್ನು ಆಯ್ಕೆ ಸಮಿತಿ ಪರಿಗಣಿಸಿದೆ.
ಸಿದ್ಧರಾಮ ಬಿರಾದಾರ ಅವರು ಮನಗೂಳಿ ಪಟ್ಟಿಕಂಥಿ ಹಿರೇಮಠದ ಮಹಾಂತರು, ಮನೆಯ ಜ್ಯೋತಿ, ಹೃದಯಗಳ ಲೋಕದಲ್ಲಿ, ಗಜಲ್‌ಗಳ ಗೆಜ್ಜೆನಾದ, ಶಕುನಿಮಾಮ, ಬಿ.ಎಸ್ ಪಾಟೀಲ ಮನಗೂಳಿಯವರ ಜೀವನ ಚರಿತ್ರೆ, ಮುಗಿಲು ದ್ವೀಪಗಳು, ನಿಜದ ಸ್ವರ್ಗ ನಿಸರ್ಗ, ಹೇಳಿ ಹೋಗುವೆ ಕಾರಣ, ಸ್ವರಾಜ್ಯದ ಹಾದಿಯಲ್ಲಿ ಮನಗೂಳಿ ಸ್ವಾತಂತ್ರೃ ಯೋಧರ ಹೆಜ್ಜೆಗಳು ಹಾಗೂ ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ ಎಂಬ ಸುಮಾರು 11ಕ್ಕೂ ಅಧಿಕ ಕೃತಿಗಳನ್ನು ರಚಿಸುವ ಮೂಲಕ ಸಾಹಿತ್ಯ ಕೃಷಿ ಮಾಡಿದ್ದಾರೆ.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ತಾಲೂಕಾ ಗೌರವ ಕಾರ್ಯದರ್ಶಿ ಯಮನಪ್ಪ ಮಿಣಜಿಗಿ, ಶಿವು ಮಡಿಕೇಶ್ವರ ಸೂಚಿಸಿದ ಇವರನ್ನು ತಾಲೂಕಾ ಗೌರವ ಅಧ್ಯಕ್ಷ ಬಸವರಾಜ ಸೋಮಪುರ, ತಾಲೂಕು ಅಧ್ಯಕ್ಷ ಶಿವಾನಂದ ಡೋಣೂರ ಹಾಗೂ ಕಸಾಪ ಮಾಜಿ ಅಧ್ಯಕ್ಷ ಆರ್.ಜಿ ಅಳ್ಳಗಿಯವರು ಅನುಮೋದಿಸಿದರು. ಎಸ್.ಎಲ್ ಓಂಕಾರ ಹಾಗೂ ಬಸವರಾಜ ಮೇಟಿ ಅಂಗೀಕರಿಸಿದರು.
ಸಭೆಯಲ್ಲಿ ಆಯ್ಕೆ ಸಮಿತಿಯ ಸದಸ್ಯರಾದ ಜಿಲ್ಲಾ ಕ.ಸಾ.ಪ ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ, ನ್ಯಾಯವಾದಿಗಳಾದ ಬಸವರಾಜ ಮರ್ತೂರ, ಚಂದ್ರಶೇಖರ ಸುಭಾನಪ್ಪರ, ರವಿ ರಾಠೋಡ, ಜಿಲ್ಲಾ ದತ್ತಿ ಸಂಚಾಲಕ ರಾಜೇಸಾಬ ಶಿವನಗುತ್ತಿ, ಎಂ.ಎನ್, ಅಂಗಡಗೇರಿ, ಶಾಂತಾ ಚೂರಿ, ಬಿ.ವಿ ಚಕ್ರಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.