ಜಿಲ್ಲೆ

ಪಶುಸಂಗೋಪನೆಯಲ್ಲಿ ಜೈವಿಕ ಭದ್ರತೆ ಅವಶ್ಯಕ: ಡೀನ್ ಡಾ. ಒ.ಆರ್.ನಟರಾಜು

ಹಾಸನ: ರೈತರ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಮತ್ತು ಮಾನವ ಪೋಷಣೆಯಲ್ಲಿ ಹಂದಿ ಸಾಕಾಣಿಕೆಯ ಮಹತ್ವದ್ದಾಗಿದೆ ಮತ್ತು ಲಾಭದಾಯಕ ಹಂದಿ ಸಾಕಣೆಯಲ್ಲಿ ಜೈವಿಕ ಸುರಕ್ಷತಾ ಅಭ್ಯಾಸಗಳ ಅತ್ಯವಶಕ ಎಂದು ಹಾಸನ ಪಶುವೈದ್ಯಕೀಯ ಮಹಾವಿದ್ಯಾಲಯದ ಡೀನ್ ಪ್ರೊ. ಒ.ಆರ್. ನಟರಾಜು ಹೇಳಿದರು.

ಹಾಸನ ಪಶುವೈದ್ಯಕೀಯ ಮಹಾವಿದ್ಯಾಲಯ ಹಾಸನ ಮತ್ತು ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ರಾಷ್ಟ್ರೀಯ ಪಶು ರೋಗ ಸೋಂಕು ಶಾಸ್ತ್ರ ಮತ್ತು ಮಾಹಿತಿ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಪರಿಶಿಷ್ಟ ಜಾತಿಯ ಸಣ್ಣ ಮತ್ತು ಅತಿ ಸಣ್ಣ ಹಂದಿ ಸಾಕಾಣಿಕೆದಾರರಿಗೆ ಜೈವಿಕ ಸುರಕ್ಷತಾ ವಿಧಾನಗಳ ಕುರಿತು ತರಬೇತಿ ಮತ್ತು ಪ್ರಾತ್ಯಕ್ಷಿತೆ- ಆರ್ಥಿಕವಾಗಿ ದುರ್ಬಲರಾದವರ ಸುಧಾರಣೆಯತ್ತ ಒಂದು ಹೆಜ್ಜೆ ಯೋಜನೆಯಡಿ ಮೂರು ದಿನಗಳ ಕಾಲ ಹಂದಿ ಸಾಕಣೆಯಲ್ಲಿ ಜೈವಿಕ ಸುರಕ್ಷತಾ ಅಭ್ಯಾಸಗಳು ಕುರಿತು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ತರಬೇತಿಯಲ್ಲಿ ಹಾಸನ, ಮಂಡ್ಯ, ಚಾಮರಾಜನಗರ ಮತ್ತು ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಪರಿಶಿಷ್ಟ ಜಾತಿಗೆ ಸೇರಿದ ಒಟ್ಟು 53 ಹಂದಿ ಸಾಕಾಣಿಕೆದಾರರು ಭಾಗವಹಿದ್ದರು ಎಂದು ತಿಳಿಸಿದರು.

ತರಬೇತಿ ಕಾರ್ಯಕ್ರಮದಲ್ಲಿ ಪಶು ಸಾಕಾಣಿಕೆಯಲ್ಲಿ ಜೈವಿಕ ಭದ್ರತೆಯ ಪ್ರಮುಖ ಪರಿಕಲ್ಪನೆ, ಆಫ್ರಿಕನ್ ಹಂದಿ ಜ್ವರ ಮತ್ತು ಅವುಗಳ ನಿಯಂತ್ರಣ ಕ್ರಮಗಳು ಮತ್ತು ಈ ರೋಗಗಳ ವಿರುದ್ಧ ಹೋರಾಡುವಲ್ಲಿ ಜೈವಿಕ ಭದ್ರತಾ ಅಭ್ಯಾಸಗಳು, ಕಡಿಮೆ ವೆಚ್ಚದ ವೈಜ್ಞಾನಿಕ ವಸತಿ, ಪೋಷಣೆ, ಹಂದಿಗಳ ಸಾಗಾಣಿಕೆ ಮತ್ತು ವಧೆಯಲ್ಲಿ ಜೈವಿಕ ಭದ್ರತೆಯ ಪಾತ್ರ ಇತ್ಯಾದಿ ವಿವಿಧ ವಿಷಯಗಳ ಕುರಿತು ಕಾಲೇಜಿನ ನುರಿತ ಪ್ರಾಧ್ಯಾಪಕರಿಂದ ತರಬೇತಿ ನೀಡಲಾಗಿದೆ ಎಂದರು.

ರೈತರಿಗೆ ತರಬೇತಿ ನೀಡಲು ರಾಷ್ಟ್ರೀಯ ಸೋಂಕು ಶಾಸ್ತ್ರ ಸಂಸ್ಥೆಯ ಡಾ. ಜಗದೀಶ ಹಿರೇಮಠ, ಡಾ. ಸತೀಶ್ ಗೌಡ ಮತ್ತು ಡಾ. ನಾರಾಯಣನ್ ಮುಂತಾದ ವಿಜ್ಞಾನಿಗಳನ್ನು ಆಹ್ವಾನಿಸಲಾಗಿತ್ತು. ಹಂದಿ ಸಾಕಣೆದಾರರಿಗೆ ಸ್ಪ್ರೇಯರ್‌ಗಳು, ವಿಶೇಷ ಗಮ್ ಬೂಟ್ಸ್‌ಗಳು ಮತ್ತು ಸೋಂಕು ನಿವಾರಕ ರಾಸಾಯನಿಕಗಳನ್ನು ಒಳಗೊಂಡಿರುವ ಉಚಿತ ಜೈವಿಕ ಸುರಕ್ಷತಾ ಕಿಟ್‌ಗಳನ್ನು ನೀಡಲಾಯಿತು. ಬೀದರ್ ವಿಶ್ವವಿದ್ಯಾಲಯದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಪಶುಮೇಳದಲ್ಲಿ ಉತ್ತಮ ರೈತ ಪ್ರಶಸ್ತಿ ಪಡೆದ ಹಾಸನದ ಹಂದಿ ಸಾಕಾಣಿಕೆದಾರ ಸುರೇಶ್ ತಿಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತರಬೇತಿಯ ಸಂಘಟಕ ಡಾ. ಎಸ್.ಪಿ.ಸತೀಶ, ಸಹಸಂಘಟಕರಾದ ಡಾ. ನಾಗಪ್ಪ, ಡಾ. ಪ್ರಲ್ಹಾದ್, ಡಾ. ಬಿ.ಸಿ.ಗಿರೀಶ್, ಡಾ.ಡಿ. ರಮೇಶ್ ಭಾಗವಹಿಸಿದ್ದರು.