ವಿಕ್ರಮ ನಾಡಿಗೇರ ಧಾರವಾಡ
ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗಲು ಹಾಗೂ ಬೋಧನೆಗೆ ಹೆಚ್ಚಿನ ಸಮಯ ನೀಡಲಿ ಎಂಬ ಕಾರಣಕ್ಕೆ ಶಾಲೆಗಳಲ್ಲಿ ಬಯೋಮೆಟ್ರಿಕ್ ಅಳವಡಿಕೆಗೆ ರಾಜ್ಯ ಸರ್ಕಾರ 2022ರಲ್ಲೇ ಆದೇಶ ಮಾಡಿತ್ತು. ಆದರೆ ಆದೇಶವನ್ನು ಇಲಾಖೆ ಅಧಿಕಾರಿಗಳು ಮಾತ್ರ ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ.
ಶಾಲೆಗಳಲ್ಲಿ ಬಯೋಮೆಟ್ರಿಕ್ ಅಳವಡಿಕೆ ಕಡ್ಡಾಯದ ಜತೆಗೆ ಪ್ರತಿ ತಿಂಗಳು ಬಯೋಮೆಟ್ರಿಕ್ ಹಾಜರಾತಿ ಗಮನಿಸಿಯೇ ವೇತನ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. 2022ರ ಸೆ. 3ರಂದು ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಆದರೆ ಈವರೆಗೂ ಜಿಲ್ಲೆಯಲ್ಲಿ ಆ ಆದೇಶ ಜಾರಿಯಾಗಿಲ್ಲ. ಸರ್ಕಾರದ ಆದೇಶ ಪಾಲನೆಯಲ್ಲಿ ಇಲಾಖೆ ಅಧಿಕಾರಿಗಳ ಗಂಭೀರತೆಯನ್ನು ಇದು ಸೂಚಿಸುತ್ತದೆ.
ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಶಾಲೆಗಳಲ್ಲಿ ಮಾತ್ರ ಬಯೋಮೆಟ್ರಿಕ್ ಅಳವಡಿಕೆ ಮಾಡಲಾಗಿದೆ. ಉಳಿದ ಶಾಲೆಗಳಲ್ಲಿ ಅಳವಡಿಕೆಗೆ ಅನುದಾನ ಕೊರತೆಯೋ ಅಥವಾ ನಿರಾಸಕ್ತಿ ಕಾರಣವೋ ತಿಳಿಯದಾಗಿದೆ. ಬಯೋಮೆಟ್ರಿಕ್ ಅಳವಡಿಸಿದರೆ ಶಿಕ್ಷಕರು ಸಂಟನೆ ಹೆಸರಿನಲ್ಲಿ ಓಡಾಡುವುದು ನಿಲ್ಲಲಿದೆ. ಹೀಗಾಗಿ ಬಯೋಮೆಟ್ರಿಕ್ ಅಳವಡಿಕೆಗೆ ಆದ್ಯತೆ ನೀಡುತ್ತಿಲ್ಲ ಎಂಬ ಮಾತುಗಳು ಶಿಕ್ಷಕರ ವಲಯದಲ್ಲಿ ಕೇಳಿ ಬರುತ್ತಿವೆ.
ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು ಸೇರಿ ಒಟ್ಟು 1538 ಶಾಲೆಗಳಿವೆ. ಈ ಪೈಕಿ 312 ಶಾಲೆಗಳಲ್ಲಿ ಮಾತ್ರ ಬಯೋಮೆಟ್ರಿಕ್ ಅಳವಡಿಸಲಾಗಿದ್ದರೆ, 1226 ಶಾಲೆಗಳಲ್ಲಿ ಅಳವಡಿಕೆ ಮಾಡಿಲ್ಲ. ಹುಬ್ಬಳ್ಳಿ ಶಹರದಲ್ಲಿ ಮಾತ್ರ ಶೇ. 50ಕ್ಕಿಂತ ಹೆಚ್ಚು ಸಾಧನೆಯಾಗಿದೆ. ಒಟ್ಟು 344 ಶಾಲೆಗಳ ಪೈಕಿ 197 ಶಾಲೆಗಳಲ್ಲಿ ಬಯೋಮೆಟ್ರಿಕ್ ಅಳವಡಿಸಿದ್ದರೆ, ಉಳಿದ 147 ಶಾಲೆಗಳಲ್ಲಿ ಅಳವಡಿಕೆಯಾಗಿಲ್ಲ. ಉಳಿದಂತೆ ಯಾವ ತಾಲೂಕಿನಲ್ಲೂ ಹೇಳಿಕೊಳ್ಳುವಂತಹ ಸಾಧನೆಯಾಗಿಲ್ಲ.
ಇಲಾಖೆ ಅಧಿಕಾರಿಗಳು ಸಹ ಸರ್ಕಾರದ ಒತ್ತಡಕ್ಕೆ ಮಣಿದು ಆದೇಶ ಮಾಡಿದಂತಾಗಿದೆ. ಆದೇಶದ ಬಳಿಕ ಯಾವ ಜಿಲ್ಲೆಯಲ್ಲಿ ಅನುಷ್ಠಾನವಾಗಿದೆ ಅಥವಾ ಆಗಿಲ್ಲ ಎಂಬುದನ್ನು ಗಮನಿಸಿದಂತಿಲ್ಲ. ಇದೇ ಕಾರಣ ಯಾವ ಶಾಲೆಗಳಲ್ಲೂ ಯಂತ್ರ ಅಳವಡಿಕೆಗೆ ಮುತುವರ್ಜಿ ವಹಿಸಿಲ್ಲ. ಇನ್ನಾದರೂ ಸ್ಥಳೀಯ ಅಧಿಕಾರಿಗಳು ಆದೇಶ ಪಾಲನೆಗೆ ಮುಂದಾಗುವರೇ ಎಂಬುದನ್ನು ಕಾದು ನೋಡಬೇಕು.
ಯಾವ ಶಾಲೆಗಳಲ್ಲಿ ಅಳವಡಿಕೆ?:: ಧಾರವಾಡ ಗ್ರಾಮೀಣ ಭಾಗದ ಒಟ್ಟು 238 ಶಾಲೆಗಳ ಪೈಕಿ 7 ಸರ್ಕಾರಿ ಶಾಲೆ, 2 ಅನುದಾನಿತ ಶಾಲೆ, 6 ಅನುದಾನ ರಹಿತ ಶಾಲೆ, ಧಾರವಾಡ ಶಹರದಲ್ಲಿ 200 ಶಾಲೆಗಳ ಪೈಕಿ ಸರ್ಕಾರಿ ಶಾಲೆಗಳಲ್ಲಿ 0, ಅನುದಾನಿತ 13, ಅನುದಾನ ರಹಿತ 19 ಶಾಲೆ, ಹುಬ್ಬಳ್ಳಿ ಗ್ರಾಮೀಣದಲ್ಲಿ 238 ಶಾಲೆಗಳ ಪೈಕಿ 6 ಸರ್ಕಾರಿ ಶಾಲೆ, 0 ಅನುದಾನಿತ ಶಾಲೆ, 12 ಅನುದಾನ ರಹಿತ, ಹುಬ್ಬಳ್ಳಿ ಶಹರದಲ್ಲಿ 344 ಶಾಲೆಗಳ ಪೈಕಿ 97 ಸರ್ಕಾರಿ ಶಾಲೆ, 18 ಅನುದಾನಿತ ಶಾಲೆ, 82 ಅನುದಾನ ರಹಿತ ಶಾಲೆ, ಕಲಘಟಗಿ ತಾಲೂಕಿನ 172 ಶಾಲೆಗಳಲ್ಲಿ 4 ಸರ್ಕಾರಿ ಶಾಲೆ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆ 0, ಕುಂದಗೋಳ ತಾಲೂಕಿನ 152 ಶಾಲೆಗಳಲ್ಲಿ 22 ಸರ್ಕಾರಿ ಶಾಲೆ, ಅನುದಾನಿತ 0, ಅನುದಾನ ರಹಿತ 6 ಶಾಲೆ ಹಾಗೂ ನವಲಗುಂದ ತಾಲೂಕಿನ 194 ಶಾಲೆಗಳಲ್ಲಿ 9 ಸರ್ಕಾರಿ ಶಾಲೆ, 4 ಅನುದಾನಿತ ಶಾಲೆ, 5 ಅನುದಾನ ರಹಿತ ಶಾಲೆಗಳಲ್ಲಿ ಮಾತ್ರ ಬಯೋಮೆಟ್ರಿಕ್ ಅಳವಡಿಕೆ ಮಾಡಲಾಗಿದೆ.
ಕೆಲ ವರ್ಷಗಳ ಹಿಂದೆಯೇ ಸರ್ಕಾರಿ ಶಾಲೆಗಳಲ್ಲಿ ಬಯೋಮೆಟ್ರಿಕ್ ಅಳವಡಿಕೆಗೆ ಆದೇಶಿಸಿದೆ. ಆದರೆ ಸಂಪೂರ್ಣ ಜಾರಿ ಆಗಿರಲಿಲ್ಲ. ಹೀಗಾಗಿ ಈ ಬಾರಿ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಬಯೋಮೆಟ್ರಿಕ್ ಅಳವಡಿಕೆಗೆ ಸೂಚಿಸಲಾಗಿದೆ. ಬಯೋಮೆಟ್ರಿಕ್ ಅಳವಡಿಕೆಗೆ ಸರ್ಕಾರ ಅನುದಾನ ನೀಡುವುದಿಲ್ಲ. ಬದಲಾಗಿ ಸ್ಥಳಿಯವಾಗಿ ಲಭ್ಯ ಇರುವ ನಿಧಿಯಿಂದಲೇ ಅಳವಡಿಕೆ ಮಾಡಿಕೊಳ್ಳಬೇಕು.*ಎಸ್.ಎಸ್. ಕೆಳದಿಮಠ, ಡಿಡಿಪಿಐ