ಮಂಡ್ಯ: ಜಿಲ್ಲೆಯಲ್ಲಿ ನಡೆಯುತ್ತಿರುವ ದ್ವಿತೀಯ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆಯ ಜೀವಶಾಸ್ತ್ರ ವಿಷಯದ ಪ್ರಶ್ನೆಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾದ ಹಿನ್ನೆಲೆಯಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಲಾಗಿದೆ.
ಮಾತ್ರವಲ್ಲದೆ ನಿಯಮ ಉಲ್ಲಂಘಿಸಿ ನಿಗದಿತ ದಿನಕ್ಕೂ ಮುನ್ನವೇ ಜೀವಶಾಸ್ತ್ರ ಪರೀಕ್ಷೆ ನಡೆಸಿದ ನಗರದ ಖಾಸಗಿ ಕಾಲೇಜಿಗೆ ನೋಟಿಸ್ ಜಾರಿ ಮಾಡಿದ್ದು, ಮೂರು ದಿನದೊಳಗೆ ಉತ್ತರ ನೀಡುವಂತೆ ಸೂಚನೆ ನೀಡಲಾಗಿದೆ. ಜತೆಗೆ ಸಂಸ್ಥೆಯ ಮಾನ್ಯತೆ ರದ್ದುಗೊಳಿಸಲು ಶಿಫಾರಸು ಮಾಡಲಾಗುತ್ತಿದೆ.
ಏನಿದು ಅವಾಂತರ?: ಜಿಲ್ಲೆಯಲ್ಲಿ ನ.6ರಿಂದ 16ರವರೆಗೆ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಧ್ಯವಾರ್ಷಿಕ ಪರೀಕ್ಷೆ ನಡೆಸಲು ವೇಳಾಪಟ್ಟಿ ನೀಡಲಾಗಿದೆ. ಅದರಂತೆ ಪರೀಕ್ಷೆ ನಡೆಯುವ ದಿನವೇ ಸಂಬಂಧಿಸಿದ ವಿಷಯದ ಪ್ರಶ್ನೆಪತ್ರಿಕೆಯನ್ನು ಸಂಸ್ಥೆಗಳಿಗೆ ನೀಡುವ ಜವಾಬ್ದಾರಿ ಪದವಿ ಪೂರ್ವ ಶಿಕ್ಷಣ ಇಲಾಖೆ ಮೇಲಿದೆ. ಆದರೆ ಮಂಡ್ಯದ ಇಲಾಖೆಯಿಂದ ಒಂದು ವಾರಕ್ಕೆ ಮುನ್ನವೇ ಪ್ರಶ್ನೆಪತ್ರಿಕೆಗಳನ್ನು ಖಾಸಗಿ ಸಂಸ್ಥೆಗೆ ನೀಡಲಾಗಿದೆ. ಇದನ್ನು ದುರುಪಯೋಗಪಡಿಸಿಕೊಂಡಿರುವ ನಗರದ ಸಂಸ್ಥೆಯೊಂದು ಜೀವಶಾಸ್ತ್ರ ಪರೀಕ್ಷೆಯನ್ನು ಮೊದಲೇ ಮುಗಿಸಿದೆ.
ಇನ್ನು ನ.14ರಂದು ಜೀವಶಾಸ್ತ್ರ ಪರೀಕ್ಷೆ ನಿಗದಿಯಾಗಿದೆ. ಇದಕ್ಕೂ ಮುನ್ನವೇ ವಿವಿಧ ಅಂಕದ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿರುವ ಇಲಾಖೆ ವಿರುದ್ಧ ಸಾಕಷ್ಟು ಟೀಕೆ ವ್ಯಕ್ತವಾಗಿದೆ. ಇದರಿಂದ ಎಚ್ಚೆತ್ತುಕೊಂಡ ಇಲಾಖೆ ಅಧಿಕಾರಿಗಳು ಗುರುವಾರ ಬೆಳಗ್ಗೆ ಖಾಸಗಿ ಸಂಸ್ಥೆಗೆ ಭೇಟಿ ನೀಡಿ ನೋಟಿಸ್ ಜಾರಿ ಮಾಡಿ, ಸೂಕ್ತ ಉತ್ತರ ನೀಡುವಂತೆ ಸೂಚನೆ ನೀಡಿದ್ದಾರೆ.
19ರಂದು ನಡೆಯಲಿದೆ ಮರುಪರೀಕ್ಷೆ: ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ರದ್ದುಗೊಂಡಿರುವ ಪರೀಕ್ಷೆಯನ್ನು ನ.19ರಂದು ಮಾಡಲು ನಿಗದಿಪಡಿಸಲಾಗಿದೆ. ಇದಲ್ಲದೆ ಪ್ರಶ್ನೆಪತ್ರಿಕೆಯನ್ನು ಹೊಸದಾಗಿ ರಚಿಸಲಾಗುತ್ತಿದೆ. ಇನ್ನು ಪ್ರಸ್ತುತ ಒಂದು ಸಂಸ್ಥೆಯಲ್ಲಿ ಮಾತ್ರ ನಿಯಮ ಉಲ್ಲಂಘಿಸಿರುವ ಆರೋಪ ಕೇಳಿಬಂದಿದೆ. ಆದರೆ ಇನ್ನೊಂದು ಸಂಸ್ಥೆಯೂ ಇದೇ ಅವಾಂತರ ಮಾಡಿಕೊಂಡಿದೆ ಎನ್ನಲಾಗುತ್ತಿದ್ದು, ಈ ಬಗ್ಗೆಯೂ ಪರಿಶೀಲನೆ ನಡೆಸಲು ಇಲಾಖೆ ಮುಂದಾಗಿದೆ.
ಇನ್ನೊಂದೆಡೆ ಇಲಾಖೆ ನಿರ್ಲಕ್ಷೃದ ಬಗ್ಗೆಯೂ ತನಿಖೆಯಾಗಬೇಕಿದೆ. ನಿಯಮ ಉಲ್ಲಂಘನೆ ಮಾಡಿ ಮುಂಚಿತವಾಗಿ ಪ್ರಶ್ನೆಪತ್ರಿಕೆ ವಿತರಣೆ ಮಾಡಿದ್ದು ಏಕೆ ಹಾಗೂ ಯಾರು ಎನ್ನುವುದಕ್ಕೆ ಉತ್ತರ ಸಿಗಬೇಕಿದೆ. ಮಧ್ಯವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಆಧಾರವಾಗಿಟ್ಟುಕೊಂಡು ವಾರ್ಷಿಕ ಪರೀಕ್ಷೆಗೆ ಇಂಟರ್‌ನಲ್ಸ್ ಅಂಕ ನೀಡಲಾಗುತ್ತದೆ.