ಹುಣಸೂರು: ದೇಶದ ಸುಸ್ಥಿರ ಮತ್ತು ಸ್ವಾವಲಂಬಿ ಅಭಿವೃದ್ಧಿಗೆ ಜೈವಿಕ ಇಂಧನದ ಉತ್ಪಾದನೆ ಅತ್ಯಗತ್ಯ ಎಂದು ಡೀಡ್ ಸಂಸ್ಥೆ ಜೈವಿಕ ಇಂಧನ ವಿಭಾಗದ ಸಂಚಾಲಕ ಪ್ರಕಾಶ್ ಅಭಿಪ್ರಾಯಪಟ್ಟರು.
ಡೀಡ್ ಸಂಸ್ಥೆಯಲ್ಲಿ ಆದಿವಾಸಿ ಪಾರ್ಲಿಮೆಂಟ್ ಸಮಿತಿ ಮತ್ತು ಆದಿವಾಸಿ ಮಹಿಳಾ ಸಂಘಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಭೂಮಿಯಿಂದ ತೆಗೆಯುವ ಪೆಟ್ರೋಲ್, ಡೀಸೆಲ್ ಮುಂದಿನ ತಲೆಮಾರಿಗೆ ಮುಗಿಯಬಹುದು, ಹೊರದೇಶದಿಂದ ತರಿಸಲು ದುಬಾರಿ ಆಗುತ್ತದೆ. ದೇಶದ ಸುಸ್ಥಿರ ಅಭಿವೃದ್ಧಿ ದೃಷ್ಟಿಯಿಂದ ಸ್ವಾವಲಂಬನೆಗೆ ಜೈವಿಕ ಇಂಧನ ಉತ್ಪಾದನೆಯ ಸಂಪನ್ಮೂಲಗಳಾದ ಹೊಂಗೆ, ಹಿಪ್ಪೆ, ಬೇವು, ಸೀಮಾರುಬಾ ಗಿಡಗಳನ್ನು ಬೆಳೆಸುವುದು ಮುಖ್ಯವಾಗಿದೆ. ಸರ್ಕಾರಿ ಜಾಗ, ಶಾಲಾ ಆವರಣದಲ್ಲಿ, ರಸ್ತೆ, ಕೆರೆ ಏರಿ, ಸಾಮಾಜಿಕ ಅರಣ್ಯ, ಗೋಮಾಳ, ರೈತರ ಬದುಗಳಲ್ಲಿ ಜೈವಿಕ ಇಂಧನ ಗಿಡ ಬೆಳೆಸಬೇಕು. ಆಳುವ ಸರ್ಕಾರಗಳೂ ಜೈವಿಕ ಇಂಧನ ಉತ್ಪಾದನಗೆ ಪ್ರೋತ್ಸಾಹಕರ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಮಾತನಾಡಿ, ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಹೊಸ ಜೈವಿಕ ಇಂಧನ ನೀತಿ ರೂಪಿಸಿ ಇಂಧನ ಸರ್ಕಾರದ ಅನುಮೋದನೆಗೆ ವಿನಂತಿಸಿರುವುದು ಕರ್ನಾಟಕದಲ್ಲಿಯೂ ಉತ್ತಮ ಬೆಳವಣಿಗೆಯಾಗಿದೆ. ಕೇಂದ್ರ ಸರ್ಕಾರ ಜೈವಿಕ ಇಂಧನ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದೆ ಎಂದು ಹೇಳಿದರು.
ಮುಖಂಡ ಹೆಮ್ಮಿಗೆ ಹರ್ಷ ಮತನಾಡಿ, ಮುಂದಿನ ದಿನಗಳಲ್ಲಿ ಆದಿವಾಸಿಗಳು ಇಂತ ಬೆಳೆಗಳಿಂದ ಆದಾಯ ಗಳಿಸಬೇಕು, ತಮ್ಮ ಬದುಗಳಲ್ಲಿ ನೆಟ್ಟಿರುವ ಹೊಂಗೆ ಮರಗಳು ಫಲ ಕೊಡುತ್ತಿವೆ. ಆದಿವಾಸಿ ಮಹಿಳಾ ಉಳಿತಾಯ ಸಂಘಗಳು, ಜೈವಿಕ ಇಂಧನ ಬೀಜ ಸಂಗ್ರಹ ಕೈಗೊಳ್ಳಬೇಕು ಎಂದು ಕೋರಿದರು.
ಮುಖಂಡರಾದ ರವಿ, ಸೂರ್ಯಕಾಂತ್, ಶ್ರೀಕಂಠ, ಹರೀಶ್ ಎನ್,ನಾಗಣ್ಣ ದೇವಾಡಿಗ, ಮಾಸ್ತಮ್ಮ, ವಿಠಲ್, ಲಕ್ಷ್ಮಿ, ಜ್ಯೋತಿ, ಜಯಪ್ಪ, ಶಾರದಾ, ಎಂಎಸ್‌ಡಬ್ಲುೃ ವಿದ್ಯಾರ್ಥಿಗಳು ಚರಣ್, ಇಂದ್ರಜಿತ್, ಸಚಿನ್, ಫಾತಿಮಾ, ಸಾಜಿ, ಸಾಹಿತಿ ಮರಡೇಶ, ಲೋಕೇಶ್ ಪಾಲ್ಗೊಂಡಿದ್ದರು. ಇದೇ ವೇಳೆ ಬುಡಕಟ್ಟು ಕೃಷಿಕರ ಸಂಘದ ಮಾಜಿ ಅಧ್ಯಕ್ಷ ಮಣಿ ಕುಮಾರ್ ಹೊಂಗೆ, ಹಿಪ್ಪೆ, ಬೇವಿನ ಬೀಜಕ್ಕೆ ಎಣ್ಣೆಯನೆರದವರಾರಯ್ಯ, ಇದು ಜೈವಿಕ ಇಂಧನ ತಿಳಿರಯ್ಯ ಎಂದು ಹಾಡು ಹಾಡಿ ರಂಜಿಸಿದರು.