ಮಾಗಡಿ: ಪ್ರತಿಯೊಬ್ಬರು ಒಂದೊಂದು ಸಸಿ ನೆಟ್ಟು ಬೆಳೆಸಿ ಪೋಷಿಸಿದರಷ್ಟೇ ಪರಿಸರ ಉಳಿಸಲು ಸಾಧ್ಯ ಎಂದು ಚಕ್ರಭಾವಿ ಜಂಗಮ ಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ಮರಳುದೇವನ ಪುರ ಗ್ರಾಮದ ಶ್ರೀಲಕ್ಷ್ಮಿದೇವಿ ದೇವಸ್ಥಾನ ಆವರಣದಲ್ಲಿ ಗ್ರಾಮ ಮತ್ತು ನಗರ ಸಬಲೀಕರಣ ಸಮಿತಿ ರಾಜ್ಯಾಧ್ಯಕ್ಷ ವಿದ್ಯಾರ್ಥಿ ಮಿತ್ರ ರವಿಕಿರಣ್ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಸಸಿ ನೆಟ್ಟು ನೀರೆರೆಯುವ ಮೂಲಕ ಚಾಲನೆ ನೀಡಿ, ಆಶೀರ್ವಚನ ನೀಡಿದ ಅವರು, ಕಾಡು ಬೆಳೆಸಿದರಷ್ಟೇ ನಾಡಿನ ಉಳಿವು ಸಾಧ್ಯ. ಜೀವಸಂಕುಲ ಭೂಮಿ ಮೇಲೆ ಬದುಕುಳಿಯಲು ಆಹಾರ, ಗಾಳಿ, ನೀರು ಸೇರಿ ಇತರ ಅಗತ್ಯತೆ ಪೂರೈಸುವ ಪರಿಸರದ ಮಹತ್ವ ಮತ್ತು ಕಾಳಜಿ ಎಲ್ಲರಿಗೂ ಅಗತ್ಯವಾಗಿದೆ ಎಂದರು.
ತಂತ್ರಜ್ಞಾನದ ಪ್ರಭಾವದಿಂದ ಪ್ರಕೃತಿಯೊಂದಿಗೆ ಒಡನಾಟ ಕಡಿಮೆಯಾಗುತ್ತಿದ್ದು, ಪರಿಸರ ರಕ್ಷಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿದಿನ ಮನೆಗೊಂದು ಸಸಿನೆಡುವಂತೆ ಜಾಗೃತಿ ಮೂಡಿಸಬೇಕು. ಆಮೂಲಕ ಪ್ರಕೃತಿಯೊಂದಿಗೆ ಸಾಮರಸ್ಯದ ಬದುಕು ಕಟ್ಟಿಕೊಳ್ಳಬೇಕು. ಪ್ರಕೃತಿಯಿಂದ ಎಲ್ಲವನ್ನೂ ಪಡೆದುಕೊಳ್ಳುವ ನಾವು ಅದಕ್ಕೆ ಕೃತಜ್ಞರಾಗಿರುವುದು ಅವಶ್ಯಕ. ವರ್ಷದಿಂದ ವರ್ಷಕ್ಕೆ ತಾಪಮಾನ ಏರಿಕೆ, ವಾಯು ಮಾಲಿನ್ಯ, ಜಲ, ಭೂ ಮಾಲಿನ್ಯವನ್ನು ಪರಿಸರ ಎದುರಿಸುತ್ತಿದೆ. ಉಸಿರಾಡಲು ಶುದ್ಧಗಾಳಿಯನ್ನು ಭವಿಷ್ಯದಲ್ಲಿ ಕೊಡುಗೆಯಾಗಿ ನೀಡುವ ಪರಿಸ್ಥಿತಿ ಬರಬಹುದು ಎಂದು ಶ್ರೀಗಳು ಎಚ್ಚರಿಸಿದರು.
ತಾಲೂಕು ರೈತಸಂಘದ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ಪ್ರಕೃತಿ ನಮ್ಮೆಲ್ಲರ ಆರಾಧ್ಯ ದೈವ. ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಆದ್ಯತೆ ನೀಡಬೇಕು. ಇದರಿಂದ ಭವಿಷ್ಯದಲ್ಲಿ ಶುದ್ಧ ಗಾಳಿ, ನೀರು ದೊರೆಯುತ್ತದೆ. ಮನುಷ್ಯ ಆರೋಗ್ಯವಾಗಿ ಬಾಳಲು, ವಾಸಿಸುವ ಪರಿಸರ ನಿರ್ಮಲವಾಗಿರಬೇಕು ಎಂದರು.
ರೈತ ಮುಖಂಡರಾದ ರಂಗಸ್ವಾಮಯ್ಯ, ಸುರೇಶ್, ಮರೂರು ಪಟೇಲ್ ಸೇರಿ ಬೆಂಗಳೂರಿನಿಂದ ಹಲವಾರು ಸ್ವಯಂ ಸೇವಕರು, ಭರವಸೆ ತಂಡ, ನಮ್ಮ ಮಾಗಡಿ ತಂಡ, ಕರ್ನಾಟಕ ಬಲ ಸೇನೆ, ನನ್ ಮಿನಿ ರೇಡಿಯೋ ಹಾಗೂ ರೈತಸಂಘದ ಪದಾಧಿಕಾರಿಗಳು ಇದ್ದರು.
200 ಸಸಿ ನಾಟಿ: ಗ್ರಾಮ ಮತ್ತು ನಗರ ಸಬಲೀಕರಣ ಸಮಿತಿ ರಾಜ್ಯಾಧ್ಯಕ್ಷ ವಿದ್ಯಾರ್ಥಿ ಮಿತ್ರ ರವಿಕಿರಣ್ ಮಾತನಾಡಿ, ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರ ಆಯುಷ್ಯ ವೃದ್ಧಿ ಮತ್ತು ನಾಡಪ್ರಭು ಕೆಂಪೇಗೌಡರ ನೆನಪಿನಲ್ಲಿ 200 ಹಣ್ಣಿನ ಗಿಡಗಳನ್ನು ನೆಡಲಾಗಿದ್ದು, ಇದೇ ರೀತಿ ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಅಭಿಯಾನ ಮುಂದುವರೆಯಲಿದೆ. ಕಳೆದ 3 ವರ್ಷಗಳಿಂದ ನಿರಂತರವಾಗಿ ಈ ಅಭಿಯಾನ ನೆಡೆಯುತ್ತಿದ್ದು, ಪ್ರಾಣಿ-ಪಕ್ಷಿಗಳಿಗೆ ನೇರವಾಗಲು ಅಭಿಯಾನ ಸಹಕಾರಿಯಾಗಿದೆ ಎಂದರು. ಇಂದಿನ ಮಕ್ಕಳಲ್ಲಿ ಪರಿಸರದ ಜಾಗೃತಿ ಅವಶ್ಯಕತೆ ಇದೆ. ಸರ್ಕಾರ ಪರಿಸರ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಪ್ರತೀ ವಿದ್ಯಾರ್ಥಿಗಳಿಂದ ಒಂದೊಂದು ಸಸಿ ನೆಡಿಸಿ ಪೋಷಿಸಿದರೆ ಉತ್ತಮ ಪರಿಸರ ಬೆಳಸಲು ಸಾಧ್ಯ ಎಂದರು.