ಆನಂದಪುರ: ಇರುವಕ್ಕಿಯ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಆವರಣಲ್ಲಿ ಜೀವ ವೈವಿಧ್ಯ ಪಾರ್ಕ್ ನಿರ್ಮಿಸಲು ಉದ್ದೇಶಿಸಲಾಗಿದ್ದು ಇದಕ್ಕೆ ಪೂರಕವಾಗಿ ಬುಧವಾರ ವಿವಿಧ ತಳಿಯ ಸಸ್ಯಗಳನ್ನು ನೆಡುವ ಕಾರ್ಯಕ್ರಮ ನಡೆಯಿತು. ಸಸ್ಯಗಳನ್ನು ಉದ್ಘಾಟಿಸಿದ ವಿವಿ ಕುಲಪತಿ ಡಾ. ಆರ್.ಜಿ.ಜಗದೀಶ್ ಮಾತನಾಡಿ, ಜೀವ ವಿಜ್ಞಾನ ಮತ್ತು ಸಸ್ಯ ವಿಜ್ಞಾನದ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಇಂತಹ ಪಾರ್ಕ್ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಈ ಪಾರ್ಕ್ ಬೃಹತ್ ರೂಪ ಪಡೆಯಲಿದೆ ಎಂದರು. ವಿವಿಯ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ತಲಾ ಐದು ಸಸಿಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿ ವಹಿಸಿಕೊಂಡರು. ಸುಮಾರು 50 ಬಗೆಯ ವಿವಿಧ ಸಸಿಗಳನ್ನು ಒಳಗೊಂಡು ಒಂದು ಸಾವಿರ ಸಸಿ ನೆಡಲಾಯಿತು.