ಜಿಲ್ಲೆ

ಲಾಕ್​ಡೌನ್ ಅವಧಿಯಲ್ಲಿಯೂ ಬಿಂದಾಸ್ ಟೂರ್

ಸುಭಾಸ ಹೆಗಡೆ ಧೂಪದಹೊಂಡ

ಶ್ರೀಧರ ಅಣಲಗಾರ ಯಲ್ಲಾಪುರ
ಲಾಕ್​ಡೌನ್ ಜಾರಿಯಲ್ಲಿರುವುದರಿಂದ ಪ್ರವಾಸಿ ತಾಣಗಳ ಪ್ರವೇಶವನ್ನು ನಿರ್ಬಂಧಿಸಲಾಗಿದ್ದರೂ ತಾಲೂಕಿನ ವಿವಿಧ ಪ್ರವಾಸಿ ತಾಣಗಳಿಗೆ ಹೊರ ಜಿಲ್ಲೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ತಾಲೂಕಿನ ಮಾಗೋಡ ಸಮೀಪದ ಜೇನುಕಲ್ಲು ಗುಡ್ಡಕ್ಕೆ ಭಾನುವಾರ ಸಂಜೆ ಧಾರವಾಡದಿಂದ 3-4 ಜನರು ಆಗಮಿಸಿದ್ದು, ಕಳೆದ ಕೆಲ ದಿವಸಗಳಿಂದ ಈ ರೀತಿ ಹೊರ ಊರುಗಳ ಪ್ರವಾಸಿಗರು ಬರುತ್ತಿರುವುದು ಸಾಮಾನ್ಯವಾಗಿದೆ.
ಭಾನುವಾರ ಸಂಜೆ ಧಾರವಾಡದ ನಾಲ್ವರು ಪ್ರವಾಸಿಗರು ಜೇನುಕಲ್ಲುಗುಡ್ಡಕ್ಕೆ ಕೆಎ 25, ಎಬಿ 1071 ನೋಂದಣಿಯ ಕಾರಿನಲ್ಲಿ ಬಂದಿದ್ದರು. ಕಾರಿಗೆ ಕೋವಿಡ್ ಕರ್ತವ್ಯ ಹಾಗೂ ಸರ್ಕಾರಿ ಸೇವೆಯಲ್ಲಿ ಎಂಬ ಫಲಕವನ್ನೂ ಅಳವಡಿಸಿಕೊಂಡಿದ್ದಾರೆ.
ಆದರೆ ವಾಹನ ಯಾವ ಇಲಾಖೆಗೆ ಸೇರಿದ್ದು, ಯಾವ ಅಧಿಕಾರಿಯ ವಾಹನ ಎಂಬ ಮಾಹಿತಿ ಇಲ್ಲ. ಸರ್ಕಾರಿ ಇಲಾಖೆಗೆ ಗುತ್ತಿಗೆ ಆಧಾರದಲ್ಲಿ ಪಡೆದ ಖಾಸಗಿ ವಾಹನ ಇದಾಗಿದ್ದು, ಅದರಲ್ಲಿ ಬಂದವರಿಗೆ ಕಾರ್ ಮೇಲೆ ಇರುವ ‘ಸರ್ಕಾರಿ ಸೇವೆಯಲ್ಲಿ’ ಎಂಬ ನಾಮಫಲಕವೇ ಶ್ರೀರಕ್ಷೆಯಾಗಿದೆ.
ಪ್ರವಾಸಿಗರು ಮಾಸ್ಕ್ ಸಹ ಧರಿಸದೆ ಬಂದಿದ್ದು, ಸ್ಥಳೀಯರು ಇವರನ್ನು ಪ್ರಶ್ನಿಸಿದಾಗ ‘ಧಾರವಾಡದಿಂದ ಬಂದಿದ್ದೇವೆ, ಪ್ರವಾಸಿ ತಾಣ ನೋಡಿಕೊಂಡು ಹೋಗುತ್ತೇವೆ’ ಎಂದು ಉತ್ತರಿಸಿದ್ದಾರೆ. ಸರ್ಕಾರಿ ಸೇವೆಯ ವಾಹನ ಎಂಬ ಫಲಕ ಇರುವ ಕಾರಣಕ್ಕಾಗಿ ಚೆಕ್​ಪೋಸ್ಟ್​ಗಳಲ್ಲಿ ಇವರನ್ನು ನಿಲ್ಲಿಸದೆ ಬಿಟ್ಟಿರಬಹುದು. ಆದರೆ, ಕರ್ತವ್ಯಕ್ಕೆ ಮಾತ್ರ ಬಳಕೆಯಾಗಬೇಕಾದ ಸರ್ಕಾರಿ ವಾಹನ, ಪ್ರವಾಸಿ ತಾಣಗಳಿಗೆ ಬಂದು ಮೋಜು-ಮಸ್ತಿ ಮಾಡಲು ದುರ್ಬಳಕೆಯಾಗುತ್ತಿದೆ.
ಹೇಳುವವರಿಲ್ಲ, ಕೇಳುವವರಿಲ್ಲ: ಮಾಗೋಡ, ಸಾತೊಡ್ಡಿ ಜಲಪಾತದಂತಹ ಪ್ರವಾಸಿ ತಾಣಗಳಲ್ಲಿ ಸಿಬ್ಬಂದಿ ಇದ್ದು, ಪ್ರವಾಸಿಗರು ಬಂದರೂ ಪ್ರವೇಶ ನಿರಾಕರಿಸಿ ಮರಳಿ ಕಳುಹಿಸುತ್ತಾರೆ. ಆದರೆ, ಜೇನುಕಲ್ಲುಗುಡ್ಡದಲ್ಲಿ ಹೇಳುವವರು, ಕೇಳುವವರು ಯಾರೂ ಇರುವುದಿಲ್ಲ. ಕಳೆದ ವರ್ಷ ಲಾಕ್​ಡೌನ್ ಸಂದರ್ಭದಲ್ಲಿ ಜೇನುಕಲ್ಲುಗುಡ್ಡಕ್ಕೆ ಹೋಗುವ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಈ ಬಾರಿ ಅಂತಹ ಕ್ರಮ ಕೈಗೊಳ್ಳದೆ ಇರುವುದರಿಂದ ಪ್ರವಾಸಿಗರ ಓಡಾಟಕ್ಕೆ ಅನುಕೂಲವಾಗಿದೆ. ಯಾರು ಯಾವಾಗ ಬೇಕಾದರೂ ಬಂದು-ಹೋಗುವ ವ್ಯವಸ್ಥೆ ಇದೆ. ಲಾಕ್​ಡೌನ್​ನಲ್ಲಿ ಮಾತ್ರವಲ್ಲ, ಸಾಮಾನ್ಯ ದಿನಗಳಲ್ಲಿಯೂ ಅಲ್ಲಿ ಸಿಬ್ಬಂದಿ ನೇಮಕ ಮಾಡದೆ ಇರುವುದರಿಂದ ಪ್ರವಾಸಿಗರು ಅಲ್ಲಿನ ಪರಿಸರದಲ್ಲಿ ತಿಂದುಂಡು, ಅಲ್ಲಿಯೇ ಕಸ, ತ್ಯಾಜ್ಯ ಎಸೆದು ಪರಿಸರ ಮಾಲಿನ್ಯ ಮಾಡಿ ಹೋಗುತ್ತಿದ್ದಾರೆ.

ಲಾಕ್​ಡೌನ್ ಇದ್ದರೂ ಹೊರ ಜಿಲ್ಲೆಯಿಂದ ಪ್ರವಾಸಿಗರು ಬರುತ್ತಿದ್ದಾರೆ. ಸರ್ಕಾರಿ ನಾಮಫಲಕ ಇರುವ ವಾಹನದಲ್ಲಿ ಬಂದು ಇಲ್ಲಿನ ಪರಿಸರದಲ್ಲಿ ಮೋಜು ಮಸ್ತಿ ಮಾಡಿದ್ದಾರೆ. ಮೊದಲೇ ನಮ್ಮ ಭಾಗದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದು, ಹೊರಗಿನವರು ಬಂದು ಸೋಂಕು ಇನ್ನಷ್ಟು ವ್ಯಾಪಿಸಲು ಕಾರಣರಾದರೆ ಹೊಣೆ ಯಾರು?
| ವಿಘ್ನೕಶ್ವರ ಭಟ್ಟ, ಗ್ರಾಮಸ್ಥ

ತಾಲೂಕಿನ ಎಲ್ಲಾ ಪ್ರವಾಸಿ ತಾಣಗಳಲ್ಲೂ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆದರೂ ಕೆಲವೆಡೆ ಹೊರಗಡೆಯಿಂದ ಪ್ರವಾಸಿಗರು ಬರುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಈ ಕುರಿತು ಮಾಹಿತಿ ಪಡೆಯಲಾಗುವುದು. ಎಲ್ಲ ಪ್ರವಾಸಿ ತಾಣಗಳ ರಸ್ತೆ ಬಂದ್ ಮಾಡಲು ಕ್ರಮ ಕೈಗೊಳ್ಳಲಾಗುವುದು.
| ಶ್ರೀಕೃಷ್ಣ ಕಾಮ್ಕರ್, ತಹಸೀಲ್ದಾರ