ಆರ್.ತುಳಸಿಕುಮಾರ್
ಬೆಂಗಳೂರು: ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ ಬಿಲ್ ಪಾವತಿಯಲ್ಲಿ ವಿಳಂಬ ಹಾಗೂ ಬಿಲ್‌ಗಳ ಪರಿಶೀಲನೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಇನ್ನಷ್ಟು ಪಾರದರ್ಶಕ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಬಿಬಿಎಂಪಿ ನಿರ್ಧರಿಸಿದೆ.
ಗುತ್ತಿಗೆದಾರರು ಕೆಲಸ ಮಾಡಿದ ಬಳಿಕ ವರ್ಷಗಟ್ಟಲೇ ಬಿಲ್ ಪಾವತಿ ಆಗದು ಎಂಬ ಅಪವಾದ ಪಾಲಿಕೆ ಮೇಲಿದೆ. ಆರ್ಥಿಕ ಸಂಪನ್ಮೂಲ ಸದ್ಬಳಕೆಯಲ್ಲಿ ಪಾರದರ್ಶಕತೆ ಅಳವಡಿಸಿಕೊಳ್ಳದಿರುವುದು, ಅನಗತ್ಯ ಕಾಮಗಾರಿಗಳಿಗೆ ಮಣೆ ಹಾಕುವ ಕಾರಣದಿಂದ ಪಾಲಿಕೆಗೆ ಹಣದ ಕೊರತೆ ಕಾಡುತ್ತಿದೆ. ಜತೆಗೆ ಅಗತ್ಯ ಇಲ್ಲದಿದ್ದರೂ, ಕೆಲವೊಂದು ಕಾಮಗಾರಿಗಳನ್ನು ತುರ್ತು ಕೆಲಸವೆಂದು ಬಿಂಬಿಸಿ ಹೆಚ್ಚಿನ ಮೊತ್ತ ನಿಗದಿ ಮಾಡುವ ಕೆಟ್ಟ ಚಾಳಿಯಿಂದಾಗಿ ಬಿಬಿಎಂಪಿ ಅರ್ಥವ್ಯವಸ್ಥೆ ಹದೆಗೆಟ್ಟಿದೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದ್ದರೂ, ಪಾಲಿಕೆಯಲ್ಲಿ ಅನುಷ್ಠಾನ ಆಗಿರಲಿಲ್ಲ. ಈಗ ಬಿಲ್ ಪಾವತಿಯಲ್ಲಿ ಒಂದಿಷ್ಟು ಸರಳೀಕರಣ ಮಾಡಿ ನೂತನ ವ್ಯವಸ್ಥೆಯಲ್ಲಿ ಲೋಪ ಆಗದಂತೆ ಮಾರ್ಗಸೂಚಿ ಒಳಗೊಂಡ ಆದೇಶವನ್ನು ಮುಖ್ಯ ಆಯುಕ್ತರು ಹೊರಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಗುತ್ತಿಗೆದಾರರ ಸಂಘವು ಬಿಲ್ ಪಾವತಿಯಲಲ್ಲಿನ ಲೋಪ ಸರಿಪಡಿಸಬೇಕು ಹಾಗೂ ಸಕಾಲಕ್ಕೆ ಹಣ ಬಿಡುಗಡೆ ಮಾಡದಿದ್ದಲ್ಲಿ ಪಾಲಿಕೆಯ ಎಲ್ಲ ವಲಯಗಳಲ್ಲಿ ಕಾಮಗಾರಿಗಳನ್ನು ಸ್ಥಗಿತಗೊಳಿಸುವ ಎಚ್ಚರಿಕೆ ನೀಡಿದ್ದರು. ಈ ವಿಚಾರವಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂಗೆ ಸಂಘವು ಪತ್ರ ಬರೆದಿತ್ತು. ಆ ಬಳಿಕ ಡಿಸಿಎಂ ಅವರು ಗುತ್ತಿಗೆದಾರರ ಮನವೋಲಿಸಿ ಬಿಲ್ ಪಾವತಿಸುವ ಭರವಸೆ ನೀಡಿದ ಬಳಿಕ ಉದ್ದೇಶಿತ ಪ್ರತಿಭಟನೆಯನ್ನು ಹಿಂಪಡೆದಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಬಿಬಿಎಂಪಿ ಆಯುಕ್ತರು ಹಣಕಾಸು ಹಾಗೂ ಆಡಳಿತ ವಿಭಾಗದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ.
2 ಹಂತಗಳಲ್ಲಿ ಬಿಲ್ ಪರಿಶೀಲನೆಗೆ ಅವಕಾಶ:
ಗುತ್ತಿಗೆದಾರರು ತಮ್ಮ ಬಿಲ್‌ಗಳನ್ನು ಐಎಫ್ಎಂಎಸ್ ತಂತ್ರಾಂಶದಲ್ಲಿ ತಮಗೆ ನೀಡಿರುವ ಲಾಗಿನ್ ಐಡಿ ಮೂಲಕ ಕಾಮಗಾರಿಯ ಬಿಲ್ ಸೃಜಿಸಿ ದಾಖಲೆಗಳನ್ನು ಸಲ್ಲಿಸಬೇಕು. ಈ ದಾಖಲೆಗಳಲ್ಲಿ ಇ-ಎಂಬಿ, ಕಾಮಗಾರಿಯ ಚಿತ್ರ, ಗುಣಮಟ್ಟ ತಪಾಸಣೆ ವರದಿ ಹಾಗೂ ಇನ್ನಿತರ ಕಡ್ಡಾಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಇವುಗಳನ್ನು ವಲಯ ಮಟ್ಟದ ಅಧಿಕಾರಿಗಳು ಪರಿಶೀಲಿಸಲು ಎರಡು ಹಂತದ ಪರಿಷ್ಕೃತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುತ್ತದೆ. 50 ಲಕ್ಷ ರೂ.ವರೆಗಿನ ಮೊತ್ತದ ಕಾಮಗಾರಿ ಯೋಜನೆ, 50 ಲಕ್ಷ ರೂ.ನಿಂದ 5 ಕೋಟಿ ರೂ. ವರೆಗೆ ಹಾಗೂ 5 ಕೋಟಿ ರೂ. ಮೇಲ್ಪಟ್ಟ ಬಿಲ್‌ಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಪರಾಮರ್ಶಿಸಿ ಆಯಾ ವಿಭಾಗದ ಹಿರಿಯ ಇಂಜಿನಿಯರ್‌ಗಲು ಲೆಕ್ಕಾಧಿಕಾರಿಗಳಿಗೆ ರವಾನಿಸಬೇಕಿದೆ.
ಇದಕ್ಕೂ ಮುನ್ನ ಆರಂಭಿಕ ಹಂತದಲ್ಲಿ ಸಹಾಯಕ ಅಭಿಯಂತರ ನಿಯಮಾನುಸಾರ ಬಿಲ್ ಪರಿಶೀಲಿಸಿ 3 ದಿನದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರಗೆ (ಎಇಇ) ಸಲ್ಲಿಸಬೇಕು. ಇದನ್ನು ಎಇಇ 3 ದಿನಗಳಲ್ಲಿ ಸಮಗ್ರವಾಗಿ ಪರಿಶೀಲಿಸಿ ಕಾರ್ಯಪಾಲಕ ಅಭಿಯಂತರರಿಗೆ (ಇಇ) ಹಸ್ತಾಂತರಿಸಬೇಕು. ಕೊನೆ ಹಂತದಲ್ಲಿ ಇಇ ಪ್ರೀ ಆಡಿಟ್ ನಡೆಸಿದ ಬಳಿಕ ಮುಖ್ಯ ಲೆಕ್ಕಾಧಿಕಾರಿಗೆ ಸಲ್ಲಿಸಬೇಕಾಗುತ್ತದೆ.
ರಾಂಡಮೈಸೇಷನ್ ಪದ್ಧತಿಗೆ ಕೊಕ್:
ಬಿಬಿಎಂಪಿ ಕೇಂದ್ರ ಕಚೇರಿಯ ಅಧಿಕಾರ ವ್ಯಾಪ್ತಿಗೆ ಒಳಪಡುವ ರಸ್ತೆ ಮೂಲಸೌಕರ್ಯ, ಕೆರೆಗಳು ಹಾಗೂ ಬೃಹತ್ ನೀರುಗಾಲುವೆಗಳ ಕಾಮಗಾರಿಗಳನ್ನು (50 ಲಕ್ಷ ರೂ. ಮಿತಿ) ಆಯಾ ಕಾರ್ಯಪಾಲಕ ಅಭಿಯಂತರರು ಗುಣ ನಿಯಂತ್ರಣ ಪ್ರಮಾಣಪತ್ರವನ್ನು ಖಾತರಿಪಡಿಸಿಕೊಳ್ಳಬೇಕು. ಎಸ್.ಆರ್. ದರಕ್ಕಿಂತ ಶೇ.3 ಹೆಚ್ಚಿನ ಟೆಂಡರ್ ಅನುಮೋದಿಸಲು ಮುಖ್ಯ ಅಭಿಯಂತರರು ಸಕಾರಣ ನಮೂದಿಸಬೇಕಾಗುತ್ತದೆ. ಕಾಮಗಾರಿಗಳ ತಪಾಸಣೆಗಾಗಿ ವಲಯದ ಮುಖ್ಯ ಅಭಿಯಂತರಿಗೆ ಅಧಿಕಾರ ಹಂಚಿಕೆ ಮಾಡಿದ್ದು, ರಾಂಡಮೈಸೇಷನ್ ಪದ್ಧತಿಯನ್ನು ಕೈಬಿಡಲಾಗಿದೆ.
ಮುಖ್ಯವಾಗಿ ವಲಯ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿದ್ದ ದೊಡ್ಡ ಮೊತ್ತದ ಬಿಲ್ ಕೇಂದ್ರ ಕಚೇರಿಯಿಂದಲೇ ಬಿಡುಗಡೆಗೆ ಕ್ರಮ ವಹಿಸಲಾಗುತ್ತದೆ.
ಸರ್ಕಾರದ ಯೋಜನೆಗೆ ಕೇಂದ್ರ ಕಚೇರಿ ಹೊಣೆ:
ಬಿಬಿಎಂಪಿಗೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನದಲ್ಲಿ ನಿರ್ವಹಿಸಿದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಹಾಲಿ ವಲಯ ಹಂತದಲ್ಲಿ ಮುಖ್ಯ ಅಭಿಯಂತರರ ಮೂಲಕ ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗುತ್ತಿತ್ತು. ಈ ಪದ್ಧತಿಯನ್ನು ಮಾರ್ಪಡಿಸಿ ಕೇಂದ್ರ ಕಚೇರಿ ಹಂತದಲ್ಲೇ ಹಣ ಬಿಡುಗಡೆ ಮಾಡುವ ನಿಯಮವನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂದು ಹೊಸ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
4,500 ಕೋಟಿ ರೂ. ಬಾಕಿ:
ಪಾಲಿಕೆಯಲ್ಲಿ ಕಳೆದ 3 ವರ್ಷಗಳಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗಿಲ್ಲ. ಬಿಬಿಎಂಪಿ ಹಾಗೂ ಸರ್ಕಾರದ ಎಲ್ಲ ಯೋಜನೆಗಳು ಸೇರಿ ಒಟ್ಟು 4,500 ಕೋಟಿ ರೂ. ಬಾಕಿ ಉಳಿಸಿಕೊಳ್ಳಲಾಗಿದೆ. ಇದನ್ನು ಹೊರತುಪಡಿಸಿ ಕಳೆದ ತಿಂಗಳವರೆಗೆ 1,000 ಕೋಟಿ ರೂ. ಬಿಡುಗಡೆಯಾಗಿದ್ದು, ಹಂತ-ಹಂತವಾಗಿ ಬಿಲ್ ಪಾವತಿಗೆ ಭರವಸೆ ನೀಡಲಾಗಿದೆ.
ಕಾಮಗಾರಿಗಳನ್ನು ಪೂರೈಸಿ 2-3 ವರ್ಷ ಬಿಲ್ ಪಾವತಿಯಾಗಿದ್ದಲ್ಲಿ ಹೊಸ ಕೆಲಸವನ್ನು ಮಾಡಲು ಗುತ್ತಿಗೆದಾರರಿಗೆ ಸಾಧ್ಯವಾಗದು. ಈ ಸಂಗತಿಯನ್ನು ಬಿಬಿಎಂಪಿ ಮುಖ್ಯಸ್ಥರು ಹಾಗೂ ಸರ್ಕಾರಕ್ಕೆ ತಿಳಿಸಿದ್ದರೂ, ಸಕಾಲಕ್ಕೆ ಹಣ ಬಿಡುಗಡೆ ಮಾಡದಿರುವುದು ನಮಗೆ ನಷ್ಟವಾಗಿದೆ. ಕಾಲಮಿತಿಯೊಳಗೆ ಹಣ ಬಿಡುಗಡೆ ಮಾಡುವ ಪದ್ಧತಿ ಅಳವಡಿಸಿಕೊಂಡಲ್ಲಿ ಗುತ್ತಿಗೆದಾರರು ಕಾಮಗಾರಿ ಕೈಗೊಳ್ಳಲು ಸಾಧ್ಯ.
- ಜಿ.ಎಂ.ನಂದಕುಮಾರ್, ಅಧ್ಯಕ್ಷ, ಬಿಬಿಎಂಪಿ ಗುತ್ತಿಗೆದಾರರ ಸಂಘ