ಶಿವಮೊಗ್ಗ: ರಾಜ್ಯದಲ್ಲಿ ಎಲ್ಲೆಂದರಲ್ಲಿ ಮಾರಾಟವಾಗುತ್ತಿರುವ ಬೀಡಿ, ಸಿಗರೇಟ್, ಗುಟ್ಖಾ ಹಾಗೂ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸಾಗಣೆ ನಿಯಂತ್ರಿಸುವ ನಿಟ್ಟಿನಲ್ಲಿ ಗುರುವಾರ ಸದನದಲ್ಲಿ ಆಡಳಿತ ಪಕ್ಷವು ಮಂಡಿಸಿದ ವಿಧೇಯಕ ಸರ್ವಾನುಮತದಿಂದ ಅಂಗೀಕಾರಗೊಂಡಿತು!
ಜಿಪಂ ಸಭಾಂಗಣದಲ್ಲಿ ಗುರುವಾರ ಶಿಕ್ಷಣ ಇಲಾಖೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನರಚನೆ ಇಲಾಖೆ, ಜಿಲ್ಲಾಡಳಿತದ ಆಶ್ರಯದಲ್ಲಿ ಏರ್ಪಡಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಕಲ್ಪಿತ ಯುವ ಸಂಸತ್‌ನಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸಾಗಣೆ ನಿಯಂತ್ರಿಸುವ ನಿಟ್ಟಿನಲ್ಲಿ ವಿಧೇಯಕ ಮಂಡನೆಯಾಯಿತು.
ಆಡಳಿತ ಮತ್ತು ವಿಪಕ್ಷಗಳ ಆರೋಪ-ಪ್ರತ್ಯಾರೋಪ, ಟೀಕೆ ಮತ್ತು ಗದ್ದಲಗಳ ನಡುವೆ ಯಶಸ್ವಿಯಾಗಿ ನಡೆಯಿತು. ಅಧಿವೇಶನದಲ್ಲಿ ಪಾಲ್ಗೊಂಡ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಪ್ರಬುದ್ಧವಾಗಿ ಮಾತನಾಡಿದರು. ಹಂಗಾಮಿ ಸಭಾಪತಿ ನೂತನವಾಗಿ ಆಯ್ಕೆಗೊಂಡ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಸಭಾಧ್ಯಕ್ಷರಾಗಿ ಯಾಮಿನಿ ಭಾಸ್ಕರ್ ನಾಯ್ಕ, ಸಿಎಂ ಆಗಿ ಎನ್.ಆರ್.ಮಹಮ್ಮದ್ ರಫೀಕ್ ಮತ್ತು ಪ್ರತಿಪಕ್ಷದ ನಾಯಕನಾಗಿ ಸುಬ್ರಹ್ಮಣ್ಯ ಹೊನ್ನಪ್ಪಗೌಡ ಆಯ್ಕೆಯಾದರು.
ಶಿಕ್ಷಣ ವಂಚಿತ ಗ್ರಾಮೀಣ ಭಾಗ, ಮಹಿಳೆಯರ ಮೇಲಿನ ದೌರ್ಜನ್ಯ, ಭ್ರಷ್ಟಾಚಾರದ ಬಗ್ಗೆ ಚರ್ಚೆಗಳು ನಡೆದವು. ಕ್ರೀಡೆ, ಪ್ರವಾಸೋದ್ಯಮ ಪ್ರೋತ್ಸಾಹ ನೀಡುವಂತೆ ಪ್ರತಿಪಕ್ಷದ ಸದಸ್ಯರು ಸರ್ಕಾರದ ಗಮನ ಸೆಳೆದರು.
ಕಲ್ಪಿತ ಸಂಸತ್ ಅನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ಮತ್ತು ಎಂಎಲ್‌ಸಿ ಡಾ.ಧನಂಜಯ ಸರ್ಜಿ ವೀಕ್ಷಿಸಿದರು. ಉಪನ್ಯಾಸಕರಾದ ಗಣಪತಿ, ಸತ್ಯನಾರಾಯಣ್ ತೀರ್ಪುಗಾರರಾಗಿದ್ದರು. ಡಿಡಿಪಿಐ ಎಸ್.ಆರ್.ಮಂಜುನಾಥ, ಡಯಟ್ ಉಪ ನಿರ್ದೇಶಕಿ ಕೆ.ಆರ್.ಬಿಂಬಾ, ಹಿರಿಯ ಉಪನ್ಯಾಸಕ ಡಾ. ಹರಿಪ್ರಸಾದ್, ಸಂಸದೀಯ ವ್ಯವಹಾರಗಳ ಸಚಿವಾಲಯದ ಸಂತೋಷ್ ಉಪಸ್ಥಿತರಿದ್ದರು.