Oplus_131072 
ಜಿಲ್ಲೆ

ಬಿಳಿಗಿರಿರಂಗನಾಥಸ್ವಾಮಿ ದೊಡ್ಡಜಾತ್ರೆ ನಾಳೆ

ರಾಜಣ್ಣ

ಯಳಂದೂರು: ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಏ.23ರಂದು ಬಿಳಿಗಿರಂಗನಾಥಸ್ವಾಮಿಯ ದೊಡ್ಡಜಾತ್ರೆ ಜರುಗಲಿದೆ.


ಪ್ರಸಿದ್ಧ ಪ್ರವಾಸಿ ಕ್ಷೇತ್ರವಾದ ಚಂಪಕಾರಣ್ಯ, ಶ್ವೇತಾದ್ರಿ, ಬಿಳಿಕಲ್ಲುಬೆಟ್ಟ, ಬಿಳಿಗಿರಿಬೆಟ್ಟ ಎಂದೆಲ್ಲಾ ಹೆಸರುವಾಸಿಯಾದ ಬಿಳಿಗಿರಿರಂಗನಬೆಟ್ಟವು ಪುಣ್ಯಕ್ಷೇತ್ರವೆನಿಸಿಕೊಂಡಿದೆ.


ತಾಲೂಕು ಕೇಂದ್ರದಿಂದ ಸುಮಾರು 24 ಕಿ.ಮೀ.ದೂರದಲ್ಲಿರುವ ಬಿಳಿಗಿರಿರಂಗನಬೆಟ್ಟದಲ್ಲಿ ಶ್ರೀಬಿಳಿಗಿರಿರಂಗಸ್ವಾಮಿ ಹಾಗೂ ಅಲಮೇಲಮ್ಮನವರು ಇಲ್ಲಿ ನೆಲೆಸಿದ್ದಾರೆ. ಮಂಗಳವಾರ ಬೆಳಗ್ಗೆ 4 ಗಂಟೆಗೆ ಕಲ್ಯಾಣೋತ್ಸವ, 6 ಗಂಟೆ ನಂತರ ಪ್ರಸ್ಥಾನ ಮಂಟಪೋತ್ಸವಗಳು, ಬೆಳಗ್ಗೆ 10.53 ಗಂಟೆ ಮೇಲೆ 11.8 ಗಂಟೆ ಒಳಗೆ ಸಲ್ಲುವ ಶುಭ ಮಿಥನ ಲಗ್ನದಲ್ಲಿ ರಥಾರೋಹಣ ನಂತರ ಶ್ರೀಮನ್ ಮಹಾರಥೋತ್ಸವ ಜರುಗಲಿದೆ.


ವಿಶೇಷ ಸೌಲಭ್ಯಗಳು: ಜಾತ್ರೆಗೆ ಆಗಮಿಸುವ ಭಕ್ತರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಪಟ್ಟಣದ ಕೆಎಸ್‌ಆರ್‌ಟಿಸಿ ಸಂಸ್ಥೆಯು ಜಾತ್ರೆಯ ಪ್ರಯುಕ್ತ 100 ಬಸ್‌ಗಳ ವಿಶೇಷ ಸೇವೆ ಒದಗಿಸಲಿದೆ. ಬೆಟ್ಟದಲ್ಲಿ ಭಕ್ತರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದ್ದು ನೀರಿನ ಅಭಾವ ಕಂಡುಬಂದ ಸಂದರ್ಭದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಒದಗಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ. ವಾಹನಗಳಲ್ಲಿ ಆಗಮಿಸುವವರಿಗೆ ಮಾರಮ್ಮ ದೇವಸ್ಥಾನ ಆವರಣ, ರೇಷ್ಮೆ ಇಲಾಖೆ ಕಚೇರಿ ಸಮೀಪ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.


ದ್ವಿಚಕ್ರ ವಾಹನ ನಿಷೇಧ: ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಸೇರುವ ನಿರೀಕ್ಷೆ ಇದ್ದು, ವಾಹನ ದಟ್ಟಣೆ ಹೆಚ್ಚಾಗುವ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಂಬಂಧ ಬಿಳಿಗಿರಿರಂಗನಬೆಟ್ಟಕ್ಕೆ ಹೋಗುವ ಗುಂಬಳ್ಳಿ ಚೆಕ್‌ಪೋಸ್ಟ್ ಹಾಗೂ ಚಾಮರಾಜನಗರ ತಾಲೂಕಿನ ಹೊಂಡರಬಾಳು ಅರಣ್ಯ ಇಲಾಖೆಗಳ ಚೆಕ್‌ಪೋಸ್ಟ್‌ಗಳ ಮೂಲಕ ತೆರಳುವ ದ್ವಿಚಕ್ರ ವಾಹನಗಳ ಸಂಪೂರ್ಣವಾಗಿ ಪ್ರವೇಶವನ್ನು ಏ.22 ರಿಂದ 23ರ ರವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.


ಪ್ರಸಾದ ವಿತರಣೆ ಅನುಮತಿ ಕಡ್ಡಾಯ: ಈ ಬಾರಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದುರಿಂದ ದಾನಿಗಳು, ಭಕ್ತರು, ಪ್ರಸಾದ-ಪಾನೀಯ ತಯಾರಿಸಿ ಭಕ್ತರಿಗೆ ವಿತರಿಸಿರುವ ಮೊದಲು ಈ ಬಗ್ಗೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.