ತಹಸೀಲ್ದಾರ್ ಎಂ.ಮಮತಾ ಎಚ್ಚರಿಕೆ * ಬಿಕ್ಕೋಡು ಗ್ರಾಮದ ವಿವಾದಿತ ಸ್ಥಳ ಪರಿಶೀಲನೆ
ಬೇಲೂರು : ಸಾರ್ವಜನಿಕ ಚಟುವಟಿಕೆಗೆ ಮೀಸಲಿಟ್ಟ ಸರ್ಕಾರಿ ಜಾಗವನ್ನು ಯಾರಾದರೂ ಒತ್ತುವರಿ ಮಾಡಿದರೆ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ತಹಸೀಲ್ದಾರ್ ಎಂ.ಮಮತಾ ಎಚ್ಚರಿಸಿದರು. ತಾಲೂಕಿನ ಬಿಕ್ಕೋಡು ಗ್ರಾಮದ ಸರ್ಕಾರಿ ಜಾಗದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುತ್ತಿರುವ ಬಗ್ಗೆ ಹಾಗೂ ಬಿಕ್ಕೋಡಿನಲ್ಲಿದ್ದ ಆಟೋ ರಿಕ್ಷಾ ನಿಲ್ದಾಣ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು, ಆಟೋ ಚಾಲಕರು ತಾಲೂಕು ಕಚೇರಿ ಎದುರು ಪ್ರತಿಭಟಿಸಿ, ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ವಿವಾದಿತ ಸ್ಥಳ ಪರಿಶೀಲಿಸಿ ಅವರು ಮಾತನಾಡಿದರು.
ಸರ್ಕಾರಿ ಜಾಗ, ಅದರಲ್ಲೂ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಜಾಗದಲ್ಲಿ ಅನುಮತಿ ಇಲ್ಲದೆ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುತ್ತಿರುವ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ಹಾಗೂ ಸ್ಥಳೀಯ ಕಂದಾಯ ಇಲಾಖೆ ಸಿಬ್ಬಂದಿ ವಿರುದ್ಧ ಅವರು ಈ ಸಂದರ್ಭ ಗರಂ ಆದರು. ನಿಮಗೆ ಯಾರು ಸರ್ಕಾರಿ ಜಾಗದಲ್ಲಿ ಮಳಿಗೆ ನಿರ್ಮಾಣ ಮಾಡಲು ಅನುಮತಿ ಕೊಟ್ಟಿರುವುದು ? ಎಂದು ನೇರವಾಗಿ ಪ್ರಶ್ನೆ ಮಾಡಿದರು. ಸರ್ವೆ ನಂ. 34 ರಲ್ಲಿ ಗೋಮಾಳದ ಜಾಗವಿದೆ. ಆದರೆ ಅಲ್ಲಿ ದೇಗುಲ ನಿರ್ಮಾಣವಾಗಿದೆ. ಅದು ನಮ್ಮ ಸಂಪ್ರದಾಯ ಸಂಕೇತ. ಆದರೆ ಇಲ್ಲಿ ಖಾಸಗಿಯವರು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವವರೆಗೂ ನೀವೇನು ಕಣ್ಣು ಮುಚ್ಚಿ ಕುಳಿತಿದ್ದೀರಾ ಎಂದು ಸಿಬ್ಬಂದಿ ವಿರುದ್ಧ ಹರಿಹಾಯ್ದರು.ಸರ್ಕಾರಿ ಜಾಗ, ಆಸ್ತಿಗಳನ್ನು ಉಳಿಸುವುದು ನಮ್ಮ ಕರ್ತವ್ಯ. ಯಾರೇ ಬಲಾಢ್ಯರು ಇದ್ದರೂ ಅವರನ್ನು ಕಾನೂನು ಬಿಡುವುದಿಲ್ಲ. ಇಲ್ಲಿ ಮಳಿಗೆ ನಿರ್ಮಿಸುವುದನ್ನು ತಕ್ಷಣದಿಂದಲೇ ನಿಲ್ಲಿಸಬೇಕು. ಸರ್ಕಾರಿ ಜಾಗದಲ್ಲಿ ಅನಧಿಕೃತ ಕಟ್ಟಡಗಳಿಗೆ ಅವಕಾಶ ನೀಡಬಾರದು. ಇಲ್ಲಿರುವ ಕೆಲ ವಸ್ತುಗಳನ್ನು ವಶ ಪಡಿಸಿಕೊಂಡು, ಮಳಿಗೆ ತೆರವುಗೊಳಿಸಿ ‘ ಸರ್ಕಾರಿ ಆಸ್ತಿ’ ಎಂದು ನಾಮಫಲಕ ಹಾಕಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.ಪೊಲೀಸ್ ಸಿಬ್ಬಂದಿ, ಆಟೊ ರಿಕ್ಷಾ ಚಾಲಕರು ಹಾಗೂ ಬಿಕ್ಕೋಡು ಗ್ರಾಮಸ್ಥರು, ಗ್ರಾಪಂ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.
=================
ದೇಗುಲವನ್ನು ಆಟೋ ಚಾಲಕರ ಸಂಘಕ್ಕೆ ವಹಿಸಲು ಸಿದ್ಧ
ಬಿಕ್ಕೋಡಿನಲ್ಲಿ ನಿರ್ಮಿಸಿರುವ ಬಲಮುರಿ ಗಣಪತಿ ದೇಗುಲದ ನಿರ್ವಹಣೆ ಕಷ್ಟವಾಗಿದೆ. ಆಟೋರಿಕ್ಷಾ ಸಂಘದವರು ನಿರ್ವಹಣೆ ಮಾಡುವುದಾದರೆ ಅವರಿಗೆ ವಹಿಸಲು ಸಿದ್ದರಿದ್ದೇವೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಹೇಳಿದರು. 2008ರಲ್ಲಿ ಬಿಕ್ಕೋಡು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರ ಹಾಗೂ ದಾನಿಗಳ ಸಹಕಾರದೊಂದಿಗೆ ಬಲಮುರಿ ಗಣಪತಿ ದೇಗುಲ ನಿರ್ಮಿಸಲಾಗಿತ್ತು. ಈ ಜಾಗವು ಕಂದಾಯ ಇಲಾಖೆಗೆ ಸೇರಿದ್ದು ಎಂದು ನಮಗೆ ತಿಳಿದಿರಲಿಲ್ಲ. ಈ ಜಾಗವು ಅಂದು ಅಂಚೆ ಮತ್ತು ತಂತಿ ಇಲಾಖೆಗೆ (ಪಿ ಆ್ಯಂಡ್ ಟಿ) ಅವರಿಗೆ ಬೇರೆ ಜಾಗ ಒದಗಿಸಿ ನಾವು ದೇವಸ್ಥಾನ ನಿರ್ಮಿಸಿದ್ದೇವೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಮಿತಿ ಖಜಾಂಚಿ ಶಿವಶಂಕರ್ ಮಾತನಾಡಿ, ಸಮಿತಿಯಲ್ಲಿ 300 ಜನ ಅಜೀವ ಸದಸ್ಯರಿದ್ದೇವೆ.ಇಲ್ಲಿ ಪ್ರತಿನಿತ್ಯ ಪೂಜೆ ನಡೆಯುತ್ತಿದೆ. ಈಗ ಅನಗತ್ಯ ಪ್ರತಿಭಟನೆ ನಡೆಯುತ್ತಿದೆ. ಮುಜರಾಯಿ ಇಲಾಖೆಗೇ ದೇಗುಲವನ್ನು ವಹಿಸಿದರೆ ನಮ್ಮ ಅಭ್ಯಂತರವಿಲ್ಲ. ಆದರೆ ವಿವಾದ ಬೇಡ ಎಂದರು. ದೇವಸ್ಥಾನ ಸಮಿತಿ ಕಾರ್ಯಾಧ್ಯಕ್ಷ ರಾಜಶೆಟ್ಟಿ, ಪ್ರಧಾನ ಕಾರ್ಯದರ್ಶಿ ರತನ್ ಕುಮಾರ್, ನಿರ್ದೇಶಕ ಮೋಹನ್‌ರಾಜ್ ಇದ್ದರು.