ವಿಜಯವಾಣಿ ಸುದ್ದಿಜಾಲ ಬೆಂಗಳೂರು
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗೆ ನಿಷೇಧವಿದ್ದರೂ, ಹೈಕೋರ್ಟ್ ಆದೇಶಕ್ಕೆ ಸೆಡ್ಡು ಹೊಡೆದು ರ್ಯಾಪಿಡೋ "ಬೈಕ್ ಡೈರೆಕ್ಟ್' ಎಂಬ ನೂತನ ಫೀಚರ್ ಅನ್ನು ಅಳವಡಿಸಿಕೊಂಡಿದ್ದು, ಬೈಕ್ ಟ್ಯಾಕ್ಸಿ ಕ್ಯಾಪ್ಟನ್ಗಳು ನೇರವಾಗಿ ಗ್ರಾಹಕರನ್ನು ಸಂಪರ್ಕಿಸಲು ಹಾಗೂ ಸೇವೆ ನೀಡಲು ಅನುವು ಮಾಡಿಕೊಟ್ಟಿದೆ. ಇದರಿಂದ ನಿಷೇಧದ ಮಧ್ಯೆಯೂ ರಾಜ್ಯದಲ್ಲಿ ಮತ್ತೆ ಬೈಕ್ ಟ್ಯಾಕ್ಸಿ ಸದ್ದು ಮಾಡುವಂತಾಗಿದೆ.
ಬ್ಯಾನ್ನಿಂದ ಕಷ್ಟಪಡುತ್ತಿರುವ ಕ್ಯಾಪ್ಟನ್ಗಳಿಗೆ ಸಹಾಯವಾಗಲು ಎಂದು ಕಂಪನಿ ಹೇಳುತ್ತಿದೆಯಾದರೂ, ಈ ಉಪಕ್ರಮವು ಹೈಕೋರ್ಟ್ ಆದೇಶದ ವಿರುದ್ಧವಾಗಿದೆ. ರ್ಯಾಪಿಡೋ ಮಾತ್ರ ಇಂತಹ ಹೊಸ ಯೋಜನೆಯೊಂದಿಗೆ ಮುನ್ನೆಲೆಗೆ ಬಂದಿದ್ದು, ಉಳಿದಂತೆ ಉಬರ್ ಮತ್ತು ಓಲಾ ತಮ್ಮ ಆ್ಯಪ್ಗಳಿಂದ ಬೈಕ್ ಟ್ಯಾಕ್ಸಿ ಆಯ್ಕೆಯನ್ನು ತೆಗೆದುಹಾಕಿವೆ.
ಹೈಕೋರ್ಟ್ನ ಆದೇಶವು ವೈಯಕ್ತಿಕ ಬೈಕ್ ಟ್ಯಾಕ್ಸಿ ಮಾಲೀಕರಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದೆ. ಆದರೆ, ಹಲವರು ಅದಕ್ಕೆ ಸರಿಯಾದ ವೇದಿಕೆ ಇಲ್ಲದೆ ಬುಕಿಂಗ್ಗಳನ್ನು ಪಡೆಯಲು ಕಷ್ಟಪಡುತ್ತಿದ್ದಾರೆ. ಇದನ್ನೇ ಅಸ್ತ್ರವಾಗಿಸಿದ ರ್ಯಾಪಿಡೋ ನೂತನ ಉಮಕ್ರಮದೊಂದಿಗೆ ಮತ್ತೆ ಬೈಕ್ ಟ್ಯಾಕ್ಸಿಯನ್ನು ಪ್ರೋತ್ಸಾಹಿಸಲು ಹೆಣಗಾಡುತ್ತಿದೆ.
ಕ್ಯಾಪ್ಟನ್ ಸಬಲೀಕರಣದ ನೆಪ: "ಬೈಕ್ ಡೈರೆಕ್ಟ್' ಕ್ಯಾಪ್ಟನ್ಗಳಿಗೆ ಉಚಿತವಾಗಿದ್ದು, ಇದು ಆ್ಯಪ್ನ ಪಾಲಿಗೆ ವಾಣಿಜ್ಯ ಸೇವೆ ಅಲ್ಲ ಎಂದು ರ್ಯಾಪಿಡೋ ಹೇಳಿಕೊಂಡಿದೆ. ಆದಾಯ ಗಳಿಸಲು ಅಗತ್ಯವಿರುವ ಸಾಧನಗಳೊಂದಿಗೆ ಕ್ಯಾಪ್ಟನ್ಗಳನ್ನು ಸಬಲೀಕರಣಗೊಳಿಸುವ ಮಾನವೀಯ ಪ್ರಯತ್ನ ಎಂದು ಕಂಪನಿ ಸ್ಪಷ್ಟೀಕರಣ ನೀಡಿದೆ. ಅಗ್ರಿಗೇಟರ್ಗಳಿಗೆ ಸೇವೆಗಳನ್ನು ಮರುಪ್ರಾರಂಭಿಸಲು ಈಗಲೂ ಅನುಮತಿ ಲಭಿಸಿಲ್ಲ. ಆದರೆ, ಸದ್ಯಕ್ಕೆ ಇದು ಲಾಭರಹಿತ ಸೇವೆ ಎಂದು "ಬೈಕ್ ಡೈರೆಕ್ಟ್' ಉಪಕ್ರಮವನ್ನು ಪ್ರೋತ್ಸಾಹಿಸುವ ರ್ಯಾಪಿಡೋ ಮುಂದೊಂದು ದಿನ ನಿಯಮಗಳು ಅನುಕೂಲವಾದರೆ ಮತ್ತೆ ವಾಣಿಜ್ಯ ಸೇವೆಯತ್ತ ಹೊರಳುವುದರಲ್ಲಿ ಅನುಮಾನವಿಲ್ಲ. ನಿಯಂತ್ರಕರು ಮತ್ತು ಉದ್ದಿಮೆದಾರರು ರ್ಯಾಪಿಡೋದ ಈ ನೂತನ ಯೋಜನೆಯತ್ತ ಸೂಕ್ಷ್ಮವಾಗಿ ಗಮನಹರಿಸಿದ್ದಾರೆ.
ನಿಯಮ ರೂಪಿಸಲು ಸಲಹೆ
ಬೈಕ್ ಟ್ಯಾಕ್ಸಿಗಳ ಸೇವೆ ಕಾರ್ಯಚರಣೆ ಮುಂದುವರೆಸುವ ಸಂಬಂಧ ನಿಯಮ ರೂಪಿಸುವ ಬಗ್ಗೆ
ಒಂದು ತಿಂಗಳಲ್ಲಿ ನಿಲುವು ತಿಳಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚಿನೆ ನೀಡಿತ್ತು. ನಗರ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಓಲಾ, ಉಬರ್, ರ್ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಲಾಗಿತ್ತು. ದೇಶದಲ್ಲಿ ಪ್ರತಿಯೊಬ್ಬರಿಗೆ ನ್ಯಾಯಯುತವಾಗಿ ವ್ಯವಾಹರ ನಡೆಸುವ ಸಂವಿಧಾನಬದ್ಧ ಹಕ್ಕಿದೆ. ಆದ್ದರಿಂದ ಬೈಕ್-ಟ್ಯಾಕ್ಸಿ ಸೇವೆ ವಿಚಾರವಾಗಿ ಸರ್ಕಾರ ನಿಯಮ ರೂಪಿಸುವತ್ತ ಚಿತ್ತ ಹರಿಸಬಹುದು. ಈಗಾಗಲೇ 13 ರಾಜ್ಯಗಳು ನಿಯಮ ರೂಪಿಸಿವೆ. ಆದರೆ ಕರ್ನಾಟಕ ನಿಷೇಧ ಹೇರಿದ್ದು, ಈ ಕುರಿತು ಯೋಚಿಸುವಂತೆ ತಿಳಿಸಿದೆ.