ಜಿಲ್ಲೆ

ಬೈಕ್‌ಗಳು ಡಿಕ್ಕಿ: ಇಬ್ಬರ ವಿದ್ಯಾರ್ಥಿಗಳ ಸಾವು

ಮಂಜುನಾಥ ತಿಮ್ಮಯ್ಯ

ಮೈಸೂರು: ನಗರದ ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್ ಬಳಿ ತಡರಾತ್ರಿ ಬೈಕ್‌ಗಳು ಡಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.


ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾದ ಸಾಯಿ ಕೀರ್ತಿ ಮಲ್ಲನಗೌಡ (24), ನವೀನ್ ಸಾಯಿ (23) ಮೃತಪಟ್ಟ ದುರ್ದೈವಿಗಳು. ಮೃತ ಸಾಯಿ ಕೀರ್ತಿ ಧಾರವಾಡದವರು. ಅವರ ತಂದೆ ಶಿಕ್ಷಕರು.


ಶುಕ್ರವಾರ ತಡರಾತ್ರಿ ಹೊರ ವರ್ತುಲ ರಸ್ತೆಯ ರಾಯಲ್ ಇನ್ ಹೋಟೆಲ್ ಬಳಿಯಿಂದ ಪಲ್ಸರ್ ಬೈಕ್‌ನಲ್ಲಿ ತೆರಳಿದ ಸಾಯಿ ಕೀರ್ತಿ, ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್ ಬಳಿಯ ಏಕಮುಖ ರಸ್ತೆಯಲ್ಲಿ ಬಂದಿದ್ದಾರೆ. ವಿರುದ್ಧ ದಿಕ್ಕಿನಲ್ಲಿ ನವೀನ್ ಇನ್ನೊಂದು ಬೈಕ್‌ನಲ್ಲಿ ವೇಗವಾಗಿ ಬಂದಿದ್ದು, ಬೈಕ್‌ಗಳೆರಡೂ ಮುಖಾಮುಖಿ ಡಿಕ್ಕಿ ಹೊಡೆದಿವೆ.

ಪರಿಣಾಮ ಹೆಲ್ಮೆಟ್ ಧರಿಸದೇ ಇದ್ದ ಕಾರಣ ಇಬ್ಬರಿಗೂ ತಲೆಗೆ ಬಲವಾದ ಏಟು ಬಿದ್ದು ಇಬ್ಬರೂ ಮೃತಪಟ್ಟಿದ್ದಾರೆ. ಹಿಂಬದಿ ಸವಾರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿ.ವಿ.ಪುರಂ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.