ಚಿಂತಾಮಣಿ: ಚಿಂತಾಮಣಿ&ಬೆಂಗಳೂರು ರಸ್ತೆಯ ಜೋಡಿ ಹೊಸಹಳ್ಳಿ ಬಳಿ ಶನಿವಾರ ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿಟ್ಟು, ಹಿಂಬದಿ ಸವಾರನ ಕಾಲು ಮುರಿದಿದೆ. ಬೆಂಗಳೂರಿನ ರಾಜಾಜಿನಗರದ ನಿವಾಸಿ ಕೊಲಂಬಸ್ (27) ಮೃತ. ಬೆಂಗಳೂರಿನ ತಾವರೆಕೆರೆಯ ನಿವಾಸಿ ಭರತೇಶ್(25) ಗಾಯಾಳು. ಸಾರಿಗೆ ಬಸ್ ಚಿಂತಾಮಣಿ ಬಸ್ ನಿಲ್ದಾಣದಿಂದ ಬೆಂಗಳೂರು ಮೂಲಕ ಹಟ್ಟಿಗೆ ತೆರಳುತಿತ್ತು. ಬೈಕ್ ಸವಾರರಿಬ್ಬರು ಬೆಂಗಳೂರಿನಿಂದ ಚಿಂತಾಮಣಿ ಕಡೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಕೈವಾರ ಪೊಲೀಸ್ ಹೊರಠಾಣೆಯ ಎಎಸ್ಐ ಪ್ರಕಾಶ್ ಮತ್ತು ಸಿಬ್ಬಂದಿ ಅಪಘಾತ ಸ್ಥಳಕ್ಕೆ ತೆರಳಿ ಮೃತಪಟ್ಟ ವ್ಯಕ್ತಿ ಹಾಗೂ ಗಾಯಾಳುವನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ ನಂತರ ಎರಡು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ಮುರಳೀಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.