ಅರಸೀಕೆರೆ: ನಗರದ ನಾಗಭೂಷಣ ಆಸ್ಪತ್ರೆ ಮುಂಭಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಆಡಳಿತ ಸೌಧ ಬಡಾವಣೆ ನಿವಾಸಿ ಬಿ.ಜಿ.ಹಟ್ಟಿ ಪ್ರದೀಪ್ ನಾಯಕ(36) ಮೃತಪಟ್ಟ ಯುವಕ.
ಹೋಟೆಲ್ ನಡೆಸುತ್ತಿದ್ದು, ಭಾನುವಾರ ಬೆಳಗ್ಗೆ ತರಕಾರಿ ತೆಗೆದುಕೊಂಡು ವಾಪಸ್ ಮರಳುವಾಗ ಈ ಅವಘಡ ಸಂಭವಿಸಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಸರ್ಕಾರಿ ಜೆ.ಸಿ.ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಬಂಧಿಕರಿಗೆ ಮೃತದೇಹ ನೀಡಲಾಯಿತು. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರಿಗೆ ಪತ್ನಿ, ಪುತ್ರಿ ಹಾಗೂ ಪುತ್ರ ಇದ್ದಾರೆ. ಸ್ವಗ್ರಾಮ ಕಾರೆಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಆಸ್ಪತ್ರೆ ಬಳಿ ಸ್ನೇಹಿತರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.