ಗೋಕರ್ಣ: ಬೈಕ್ ಕಳ್ಳತನದ ಆರೋಪಿಗಳಿಬ್ಬರನ್ನು ಗೋಕರ್ಣ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಕಾರವಾರ ಶಿರವಾಡದ ಆನಂದ ಲಿಂಗಬಸಪ್ಪ ಚಲವಾದಿ ಹಾಗೂ ದಾಂಡೇಲಿ ಸುಭಾಷ್ ನಗರದ ಮಹಮದ್ ಫರಾನ್ ರಜಾಕ್ ಬಂಧಿತರು.
ಈ ಪೈಕಿ ಆನಂದ ಚಲವಾದಿ ರಾಜ್ಯಾದ್ಯಂತ 20 ಕ್ಕೂ ಹೆಚ್ಚು ಬೈಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು 2 ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಫೆ.18 ರಂದು ಶಿವರಾತ್ರಿ ಸಂದರ್ಭದಲ್ಲಿ ಲಾಡ್ಜ್ ಒಂದರ ಎದುರಿನಿಂದ 1.5 ಲಕ್ಷ ರೂ. ಮೌಲ್ಯದ ಬಜಾಜ್ ಪಲ್ಸರ್ ಬೈಕ್ ಕಳವಾಗಿತ್ತು. ಈ ಬಗ್ಗೆ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ
ಬೆನ್ನು ಹತ್ತಿದ ಗೋಕರ್ಣ ಇನ್ಸ್ಪೆಕ್ಟರ್ ಮಂಜುನಾಥ ಗೌಡ, ಪಿಎಸ್‌ಐ ಹರೀಶ ಆರೋಪಿಗಳನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ರಾಜೇಶ ಎನ್.ನಾಯ್ಕ, ಸಚಿನ್ ಜಿ.ನಾಯ್ಕ, ಕಿರಣಕುಮಾರ ಬಾಳೂರು, ಪ್ರಕಾಶ ಎಂ., ಮಂಜುನಾಥ ಕೊಂಟಿಕಲ್, ವಸಂತ ನಾಯ್ಕ, ವಿನಯ ನಾಯ್ಕ, ರವಿ ಹಾಡಕರ್, ರಾಜು ಮಾಜಾಳಿ ಪಾಲ್ಗೊಂಡಿದ್ದರು.