ಶಿವಮೊಗ್ಗ ದೊಡ್ಡಪೇಟೆ ಠಾಣೆ 
ಜಿಲ್ಲೆ

ಟ್ರಯಲ್ ನೋಡುವುದಾಗಿ ಹೇಳಿ ಬೈಕ್ ಕಳವು

ಶಿವಮೊಗ್ಗ: ಟ್ರಯಲ್ ನೋಡಿಕೊಂಡು ಬರುವುದಾಗಿ ಹೇಳಿ ಬೈಕ್ ಕಳವು ಮಾಡಲಾಗಿದೆ. ಹೊಸನಗರದ ಪ್ರಮೋದ್ ಭಟ್ ಅವರ ಬೈಕ್ ಕಳವು ಮಾಡಲಾಗಿದೆ.

ಪ್ರಮೋದ್ ಭಟ್ ತಮ್ಮ ಪಲ್ಸರ್ ಬೈಕ್ ಮಾರಾಟ ಮಾಡಲು ನಿರ್ಧರಿಸಿ ಫೇಸ್‌ಬುಕ್‌ನಲ್ಲಿ ವಿವರ ಪ್ರಕಟಿಸಿದ್ದರು. ಬೆಂಗಳೂರು ನಿವಾಸಿ ನವೀನ್ ಇದಕ್ಕೆ ರಿಪ್ಲೆ ಮಾಡಿ, ಬೈಕ್ ವಿವರ ಪಡೆದುಕೊಂಡಿದ್ದ. ಮೂರು ದಿನದ ಹಿಂದೆ ಶಿವಮೊಗ್ಗಕ್ಕೆ ಬರುವುದಾಗಿ ತಿಳಿಸಿದ್ದರಿಂದ ಪ್ರಮೋದ್ ಭಟ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಬಂದಿದ್ದರು.

ಬಸ್ ನಿಲ್ದಾಣ ಎದುರಿನ ಅಶೋಕ ಹೊಟೇಲ್ ಬಳಿ ಪ್ರಮೋದ್ ಭಟ್ ಅವರನ್ನು ಭೇಟಿಯಾದ ನವೀನ್, ಬೈಕ್ ಖರೀದಿಗೆ ಆಸಕ್ತಿ ತೋರಿಸಿದ್ದ. 70 ಸಾವಿರ ರೂ. ಕೊಡುತ್ತೇನೆ. ಉಳಿದ 1.20 ಲಕ್ಷ ರೂ. ಬೈಕ್ ಸಾಲ ತೀರಿಸಲು ಮಾತುಕತೆಯಾಗಿತ್ತು. ಬಳಿಕ ಟ್ರಯಲ್ ನೋಡುವುದಿದೆ ಎಂದು ತಿಳಿಸಿ ಬೈಕ್ ಕೊಂಡೊಯ್ದಿದ್ದ.

ಮಧ್ಯಾಹ್ನ 12ರ ಸುಮಾರಿಗೆ ಹೋದ ನವೀನ್ ವಾಪಸ್ಸಾಗಲಿಲ್ಲ. 2ರವರೆಗೆ ಕಾದರೂ ಆತನ ಸುಳಿವು ಇರಲಿಲ್ಲ. ಒಮ್ಮೆ ಪೋನ್ ಸ್ವೀಕರಿಸಿದ್ದ ಆತ ಬಳಿಕ ಕರೆ ಸ್ವೀಕರಿಸಿರಲಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬೈಕ್ ಟ್ರಯಲ್‌ಗೆ ಕೊಂಡೊಯ್ದವನು ಕಳ್ಳತನ ಮಾಡಿದ್ದಾನೆಂದು ಆರೋಪಿಸಿ ಪ್ರಮೋದ್ ಭಟ್‌ ದೊಡ್ಡಪೇಟೆ ಠಾಣೆಗೆ ದೂರು ನೀಡಿದ್ದಾರೆ.