ಜಿಲ್ಲೆ

ಮರ ಬಿದ್ದು ಬೈಕ್ ಸವಾರ ಸಾವು

ವೀರೇಶ ಸೌದ್ರಿ

ಯಲ್ಲಾಪುರ: ತಾಲೂಕಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಮಂಗಳವಾರ ರಾತ್ರಿ ಭಾರಿ ಗಾಳಿ ಅವಾಂತರ ಸೃಷ್ಟಿಸಿದೆ.

ತಾಲೂಕಿನ ಹಾಸಣಗಿ ಗ್ರಾಪಂ ವ್ಯಾಪ್ತಿಯ ಮಾಳಕೊಪ್ಪ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಎದುರು ಬೈಕ್ ಮೇಲೆ ಮರ ಬಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಾಸಣಗಿ ಕಬ್ಬಿನಗದ್ದೆಯ ವಿನಯ ಮಂಜುನಾಥ ಗಾಡಿಗ (25) ಮೃತ ಸವಾರ. ತಹಸೀಲ್ದಾರ್ ಅಶೋಕ ಭಟ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಮಂಚಿಕೇರಿ ಸಮೀಪದ ಕಂಪ್ಲಿ ಕ್ರಾಸ್ ಬಳಿ ಬೃಹತ್ ಮರವೊಂದು ಬಿದ್ದು ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದ ಕೆಲಕಾಲ ಪ್ರಯಾಣಿಕರು ಪರದಾಡಿದರು. ಕೂಡಲೇ ಅರಣ್ಯ ಇಲಾಖೆ ಮತ್ತು ಹೆಸ್ಕಾಂ ಸಿಬ್ಬಂದಿ ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.