ಜಿಲ್ಲೆ

ಹಳ್ಳದಲ್ಲಿ ಕೊಚ್ಚಿಹೋದ ಬೈಕ್​ ಸವಾರ

chandru

ಕಲಬುರಗಿ: ರಾಜ್ಯದ ಕೆಲವೆಡೆ ಭಾರಿ ಮಳೆಗೆ ಅವಾಂತರಗಳು ಉಂಟಾಗಿದ್ದು, ಬೈಕ್​ ಸವಾರನೊಬ್ಬ ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಶ್ರೀಚಂದ ಗ್ರಾಮದಲ್ಲಿ ಈ ಅನಾಹುತ ಸಂಭವಿಸಿದೆ.


ಗ್ರಾಮದ ಬೀರಶೆಟ್ಟಿ ಭೋದನವಾಡಿ ಹಳ್ಳದಲ್ಲಿ ಯುವಕ ಕೊಚ್ಚಿಹೋಗಿದ್ದಾನೆ. ಭಾನುವಾರ ಜಮೀನಿನಲ್ಲಿ ಕೆಲಸ ಮುಗಿಸಿ ಬೈಕ್​ನಲ್ಲಿ ಮನೆಗೆ ವಾಪಸ್ ಶ್ರೀಚಂದದ ಹಳ್ಳ ತುಂಬಿ ಹರಿಯುತ್ತಿದ್ದರೂ ಬೈಕ್‌ ಚಲಾಯಿಸುತ್ತಲೇ ಅದನ್ನು ದಾಟಲು ಯತ್ನಿಸಿದ್ದೇ ಅವಘಡಕ್ಕೆ ಕಾರಣ.

ಹಳ್ಳದ ಮಧ್ಯೆ ಬೈಕ್ ಸ್ಕಿಡ್ ಆಗಿ ಬಿದ್ದ ಬೀರಶೆಟ್ಟಿ, ಬಳಿಕ ಎದ್ದು ಬೈಕ್ ಸ್ಟಾರ್ಟ್ ಮಾಡಲು ಮುಂದಾಗಿದ್ದ. ಬೈಕ್​ ನೀರಿನಲ್ಲಿ ಬಿದ್ದಿದ್ದರಿಂದ ತಕ್ಷಣ ಸ್ಟಾರ್ಟ್ ಆಗಿರಲಿಲ್ಲ. ನೀರಿನ ಸೆಳೆತಕ್ಕೆ ಸಿಕ್ಕಿದ ಆತನನ್ನು ರಕ್ಷಿಸಲು ‌ಸ್ಥಳೀಯರು ಹಗ್ಗ ಎಸೆದಿದ್ದರು. ಆದರೆ ಹಗ್ಗವನ್ನು ಸೊಂಟಕ್ಕೆ ಕಟ್ಟಿಕೊಳ್ಳುವಷ್ಟರಲ್ಲಿ ನೀರಿನ ರಭಸಕ್ಕೆ ಆತ ಕೊಚ್ಚಿ ಹೋಗಿದ್ದಾನೆ. ಅಗ್ನಿ ಶಾಮಕ ಸಿಬ್ಬಂದಿ ಮತ್ತು ಪೊಲೀಸರು ಶೋಧ ಕಾರ್ಯ ನಡೆಸಿದ್ದು, ನರೋಣಾ ಪೊಲೀಸ್ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.