ಗೋವಿಂದ 
ಜಿಲ್ಲೆ

ಅಪಘಾತದಲ್ಲಿ ಬೈಕ್ ಸವಾರ ಸಾವು

ಮಾಗಡಿ: ಪಟ್ಟಣದ ಜ್ಯೋತಿನಗರ ಬಳಿ ಕಾರು ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟು, ಹಿಂಬದಿ ಸವಾರರಿಬ್ಬರು ತೀವ್ರ ಗಾಯಗೊಂಡಿದ್ದಾರೆ.

ದೊಡ್ಡಸೋಮನಹಳ್ಳಿಯ ಗೋವಿಂದ (35) ಮೃತ. ಗೋವಿಂದ ಅವರು ಸೋಲೂರು ಬಳಿ ಗಣೇಶ ವಿಸರ್ಜನಾ ಮಹೋತ್ಸವದ ಗೊಂಬೆ ಕುಣಿತ ಸೇವೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಸ್ನೇಹಿತರಾದ ಗಂಗಾಧರಯ್ಯ ಹಾಗೂ ಜಾಣಗೆರೆ ಮೂಲದ ಮತ್ತೊಬ್ಬರೊಂದಿಗೆ ಒಂದೇ ಬೈಕ್‌ನಲ್ಲಿ ಸ್ವಗ್ರಾಮ ದೊಡ್ಡಸೋಮನಹಳ್ಳಿಗೆ ಮರಳುತ್ತಿದ್ದಾಗ ಕಾರು ಡಿಕ್ಕಿಯಾಗಿದೆ.

ಅಪಘಾತದ ರಭಸಕ್ಕೆ ಗೋವಿಂದ ಅವರಿಗೆ ತೀವ್ರ ರಕ್ತಸ್ರಾವವಾಗಿದ್ದು, ತಕ್ಷಣವೇ ಮಾಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗಲಿಲ್ಲ. ಬೈಕ್‌ನಲ್ಲಿದ್ದ ಮತ್ತಿಬ್ಬರ ಕಾಲು ಮತ್ತು ಬೆನ್ನಿನ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದೆ.

ಮೃತನಿಗೆ ತಾಯಿ ಹಾಗೂ ಪತ್ನಿ ಇದ್ದಾರೆ. ಅಂತ್ಯಕ್ರಿಯೆಯನ್ನು ದೊಡ್ಡಸೋಮನಹಳ್ಳಿಯ ಜಮೀನಿನಲ್ಲಿ ನೆರವೇರಿಸಲಾಯಿತು. ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.