ಜಿಲ್ಲೆ

ಸೂಲಿಬೆಲಿ ನೇತೃತ್ವದಲ್ಲಿ ಬೈಕ್ ರ‍್ಯಾಲಿ

ಹುಬ್ಬಳ್ಳಿ: ‘ಜನ ಗಣ ಮನ ಬೆಸೆಯೋಣ’ ಸಂದೇಶ ಸಾರುವ ಉದ್ದೇಶದಿಂದ ಯುವ ಬ್ರಿಗೇಡ್ ಸಂಸಾಪಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ನಗರದ ವಿವಿಧೆಡೆ ಬುಧವಾರ ಅದ್ದೂರಿಯಾಗಿ ಬೈಕ್ ರ‍್ಯಾಲಿ ನಡೆಯಿತು.

ಇಲ್ಲಿನ ಗದಗ ರಸ್ತೆಯಲ್ಲಿ ಸಮಾವೇಶಗೊಂಡ ಯುವ ಬ್ರಿಗೇಡ್ ಕಾರ್ಯಕರ್ತರು, ಬೈಕ್ ರ‍್ಯಾಲಿ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತ ಮಾರ್ಗವಾಗಿ ಮೂರು ಸಾವಿರ ಮಠ ತಲುಪಿದರು. ರ್ಯಾಲಿಗೆ ಮಹಿಳೆಯರು ಆರತಿ ಬೆಳಗಿದರು. ಡೊಳ್ಳು ಕುಣಿತ ರ್ಯಾಲಿಗೆ ಮೆರಗು ಹೆಚ್ಚಿಸಿತು. ಸೂಲಿಬೆಲೆ ಅವರು ಮೂರುಸಾವಿರ ಮಠದ ಕರ್ತೃ ಗದ್ದುಗೆಗೆ ತೆರಳಿ ದರ್ಶನ ಪಡೆದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ರಾಜ್ಯದಲ್ಲಿ ಜನ ಗಣ ಮನ ಬೆಸೆಯೋಣ ಸಂದೇಶ ಸಾರಲು, ಎಲ್ಲ ವರ್ಗದ ಜನರನ್ನು ಸೇರಿಸಲು ಹಾಗೂ ಮೂರನೇ ಬಾರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವ ಉದ್ದೇಶದಿಂದ ಬ್ರಿಗೇಡ್ ಮೂಲಕ ಬೈಕ್ ರ‍್ಯಾಲಿ ಮಾಡಲಾಗುತ್ತಿದೆ ಎಂದರು.

ಈಗಾಗಲೇ ಚಾಮರಾಜನಗರದಿಂದ ಆರಂಭವಾದ ರ್ಯಾಲಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೋದಿ ಅವರ ಬಗ್ಗೆ ಜನರದಲ್ಲಿ ಒಳ್ಳೆಯ ಅಭಿಪ್ರಾಯವಿದೆ ಎಂದರು.

ಗಲಭೆಯಲ್ಲಿ ಭಾಗಿ ಆದವರನ್ನು ಬಿಡುಗಡೆಗೊಳಿಸುತ್ತಿರುವ ರಾಜ್ಯ ಸರ್ಕಾರದ ನಡೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕುಕ್ಕರ್ ಬಾಂಬ್, ಹಳೇ ಹುಬ್ಬಳ್ಳಿ ಹಾಗೂ ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣದಲ್ಲಿ ಭಾಗಿಯಾದವರನ್ನು ಕಾಂಗ್ರೆಸ್​ನವರು ಬ್ರದರ್ ಎನ್ನುತ್ತಾರೆ. ಹಾಗಾಗಿ ಅವರನ್ನು ಬಿಡುಗಡೆಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇದು ದುರಂತದ ಸಂಗತಿ ಎಂದರು.