ಜಿಲ್ಲೆ

ಪ್ರತಿಭಟನೆ ಸೀಮಿತವಾದ ಮುಷ್ಕರ, ನೆಲಮಂಗಲದಲ್ಲಿ ಕಾರ್ಮಿಕರಿಂದ ಬೈಕ್ ರ‌್ಯಾಲಿ, ಕಾರ್ಮಿಕ ವಿರೋಧಿ ನೀತಿಗೆ ಅಸಮಾಧಾನ

Bengaluru Rural

ನೆಲಮಂಗಲ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ದೇಶದ ಹಲವು ಕೇಂದ್ರ ಕಾರ್ಮಿಕರ ಸಂಘಟನೆಗಳು ಕರೆ ನೀಡಿದ್ದ ದೇಶವ್ಯಾಪಿ ಮುಷ್ಕರಕ್ಕೆ ತಾಲೂಕಿನಲ್ಲಿ ಸ್ಪಂದನೆ ವ್ಯಕ್ತವಾಗಲಿಲ್ಲ. ಪ್ರತಿಭಟನೆಗಷ್ಟೇ ಸೀಮಿತವಾಗಿತ್ತು.

ಗುರುವಾರ ಬೆಳಗ್ಗಿನಿಂದಲೇ ತಾಲೂಕಿನ ವಿವಿಧ ಪ್ರದೇಶಗಳಲ್ಲಿನ 15ಕ್ಕೂ ಹೆಚ್ಚು ಕಾರ್ಖಾನೆಗಳ ಕಾರ್ಮಿಕರು ಸಿಐಟಿಯುನ ತಾಲೂಕು ಸಮಿತಿ ನೇತೃತ್ವದಲ್ಲಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಕೇಂದ್ರ ಎಐಟಿಯುಸಿ ಸಂಘಟನೆ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನಗರದ ಪೇಟೆಬೀದಿಯಲ್ಲಿ ಮುಷ್ಕರದ ವಾತಾವಣ ನಿರ್ಮಾಣವಾಗಿದ್ದು ಹೊರತುಪಡಿಸಿದರೆ ಉಳಿದಂತೆ ಎಲ್ಲ ಸೇವೆಗಳು ಲಭ್ಯವಿದ್ದವು.

ಬೈಕ್ ರ‌್ಯಾಲಿ ಮತ್ತು ಪ್ರತಿಭಟನಾ ಮೆರವಣಿಗೆ: ಬಂದ್ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಬಳಿ ಸಿಐಟಿಯು ಸಂಘಟನೆ ನೇತೃತ್ವದಲ್ಲಿ ಸಮಾವೇಶಗೊಂಡ ನೂರಾರು ಕಾರ್ಮಿಕರು ವೀವರ್ಸ್‌ಕಾಲನಿ ವರೆಗೂ ಬೈಕ್ ರ‌್ಯಾಲಿ ನಡೆಸಿದರು. ಮತ್ತೆ ತಾಲೂಕು ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದ ಕಾರ್ಮಿಕರು ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ರೂಪಿಸಿರುವ ಕಾರ್ಮಿಕ ಸಂಹಿತೆ ಹಾಗೂ ರೈತ ವಿರೋಧಿ ಕೃಷಿ ಸಂಬಂಧಿ ಕಾಯ್ದೆಗಳನ್ನು ಹಿಂಪಡೆಯವುದು, ಕಾರ್ಪೋರೇಟ್ ಪರವಿರುವ ಕಾನೂನು ಹಿಂಪಡೆಯುವುದು, ರೈಲ್ವೆ ಮುಂತಾದ ಇಲಾಖೆಗಳ ಖಾಸಗೀಕರಣಕ್ಕೆ ವಿರೋಧ, ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಲಾಯಿತು.

ಸಿಐಟಿಯ ತಾಲೂಕು ಸಮಿತಿ ಉಪಾಧ್ಯಕ್ಷ ರವೀಶ್, ಕಾರ್ಯದರ್ಶಿ ಕಿರಣ್.ವಿನಯ್, ಸಂಘಟನಾಕಾರ್ಯದರ್ಶಿ ಗಂಗಾಧರ್, ಸಹಕಾರ್ಯದರ್ಶಿ ಗಿರೀಶ್, ಪ್ರಭು, ಕಾರ್ಮಿಕ ಮುಖಂಡ ರಮೇಶ್, ರಘು, ಗಂಗಾಧರ್, ರವಿ.ಕುಮಾರ್, ಲಕ್ಷ್ಮೀಕಾಂತ್, ಮುನಿರಾಜು, ಕೃಷ್ಣಮೂರ್ತಿ, ಮತ್ತಿತರರು ಇದ್ದರು.

ಮುಂಜಾಗ್ರತಾ ಕ್ರಮ: ಪ್ರತಿಭಟನಾ ಮೆರವಣಿಗೆಯ ವೇಳೆ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯಿಂದ ಸಿಬ್ಬಂದಿ ನಿಯೋಜಿಸಲಾಗಿತ್ತು.