ಮೈಸೂರು: ಕಾರ್ಗಿಲ್ ವಿಜಯ್ ದಿವಸದ ರಜತ ಮಹೋತ್ಸವ ಅಂಗವಾಗಿ ರಾಜ್ಯ ಮಾಜಿ ಸೈನಿಕರ ಸಂಘದ ಜಿಲ್ಲಾ ಘಟಕವು ಜು.26ರಂದು ಬೆಳಗ್ಗೆ 9 ಗಂಟೆಗೆ ಮಾಜಿ ಸೈನಿಕರು ಹಾಗೂ ಆಸಕ್ತ ನಾಗರಿಕರನ್ನು ಒಳಗೊಂಡಂತೆ ಬೈಕ್ ರ‌್ಯಾಲಿ ಆಯೋಜಿಸಿದೆ ಎಂದ ಘಟಕದ ಅಧ್ಯಕ್ಷ ಕೆ.ಪಿ.ದಿವಾಕರ್ ತಿಳಿಸಿದರು.
ಅಂದು ರ‌್ಯಾಲಿಯು ಮೆಟ್ರೋಪೋಲ್ ವೃತ್ತದಿಂದ ಹೊರಟು ರೈಲ್ವೆ ನಿಲ್ದಾಣ, ಆಯುರ್ವೇದ ಆಸ್ಪತ್ರೆ ರಸ್ತೆ, ಸಯ್ಯಜಿರಾವ್ ರಸ್ತೆ, ಪ್ರಭಾ ಚಿತ್ರಮಂದಿರ, ಹಾರ್ಡಿಂಜ್ ವೃತ್ತದ ಮೂಲಕ ಸಾಗಿ ಕುವೆಂಪುನಗರದ ಚಿಕ್ಕಮ್ಮಾನಿಕೇತನ ತಲುಪಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯುವ ಪೀಳಿಗೆಗೆ ದೇಶ ಪ್ರೇಮದ ಅರಿವು ಮೂಡಿಸುವ ಸಲುವಾಗಿ ಹಾಗೂ ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದವರ ಸ್ಮರಣಾರ್ಥ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬಳಿಕ ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದವರ ಕುಟುಂಬದವರನ್ನು ಚಿಕ್ಕಮ್ಮಾನಿಕೇತನದಲ್ಲಿ ಸನ್ಮಾನಿಸಲಾಗುತ್ತದೆ ಎಂದರು.
ಪದಾಧಿಕಾರಿಗಳಾದ ರಾಜೇಶ್, ಚಿತ್ರಾ ಸುಬ್ಬಯ್ಯ, ಸುಂದರ್‌ರಾಜ್ ಇದ್ದರು.