ಸೋಮವಾರಪೇಟೆ: ಸ್ವಾಮಿ ವಿವೇಕಾನಂದ ಹಾಗೂ ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ಜನ್ಮ ದಿನಾಚರಣೆ ಅಂಗವಾಗಿ ತಾಲೂಕು ಹಿಂದು ಜಾಗರಣಾ ವೇದಿಕೆ ವತಿಯಿಂದ ಪಟ್ಟಣದ ಆಂಜನೇಯ ದೇವಾಲಯದಲ್ಲಿ ಯುವ ಸಮಾವೇಶ ಮತ್ತು ಬೈಕ್ ಜಾಥಾ ನಡೆಯಿತು.
ಯುವ ಸಮಾವೇಶದಲ್ಲಿ ಮಾತನಾಡಿದ ವಿಶ್ವ ಹಿಂದು ಪರಿಷತ್‌ನ ಪ್ರಮುಖರಾದ ಚಿ.ನಾ.ಸೋಮೇಶ್ ಅವರು, ಸ್ವಾಮಿ ವಿವೇಕಾನಂದರ ಆದರ್ಶ, ರಾಷ್ಟ್ರಭಕ್ತಿಯನ್ನು ಇಂದಿನ ಯುವ ಜನಾಂಗ ಮೈಗೂಡಿಸಿಕೊಳ್ಳಬೇಕು. ಭಾರತದ ಸ್ವಾತಂತ್ರ್ಯಕ್ಕಾಗಿ ಆಜಾದ್ ಹಿಂದ್ ಫೌಜ್ ಸೇನೆಯನ್ನು ಕಟ್ಟಿದ ನೇತಾಜಿ ಅವರ ಕೆಚ್ಚೆದೆಯ ಹೋರಾಟ ಎಲ್ಲರಿಗೂ ಸ್ಫೂರ್ತಿಯಾಗಬೇಕು ಎಂದರು.
ದೇವಾಲಯ ಆವರಣದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ನಡೆದು, ಬೇಳೂರು ಬಾಣೆಯಲ್ಲಿ ಸಮಾಪ್ತಿಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಸಾವನ್ ರಮೇಶ್ ವಹಿಸಿದ್ದರು. ಹಿಂದು ಜಾಗರಣಾ ವೇದಿಕೆ ಜಿಲ್ಲಾ ಸಂಯೋಜಕ ಬೋಜೇಗೌಡ, ತಾಲೂಕು ಸಂಯೋಜಕ ಎಂ.ಬಿ.ಉಮೇಶ್, ಪದಾಧಿಕಾರಿಗಳಾದ ಸೂರಜ್, ಸುನಿಲ್ ಮಾದಾಪುರ, ಸುಭಾಷ್ ತಿಮ್ಮಯ್ಯ, ರವಿಕುಶಾಲಪ್ಪ ಇದ್ದರು.