ಕೊಳ್ಳೇಗಾಲದ ಬಸ್ ನಿಲ್ದಾಣ ಪಕ್ಕದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಫುಟ್‌ಪಾತ್‌ನಲ್ಲಿ ಬೈಕ್‌ಗಳನ್ನು ನಿಲುಗಡೆ ಮಾಡಿರುವುದು 
ಜಿಲ್ಲೆ

ಬೈಕ್ ನಿಲುಗಡೆಯಿಂದ ಸುಗಮ ಸಂಚಾರಕ್ಕೆ ಅಡಚಣೆ

ಅಭಿನಯ್ ಎಚ್.ಎಂ

ಕೊಳ್ಳೇಗಾಲ: ಪಟ್ಟಣದ ಬಸ್ ನಿಲ್ದಾಣ ಪಕ್ಕದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ (209) ಫುಟ್‌ಪಾತ್‌ನಲ್ಲಿ ಬೈಕ್ ನಿಲುಗಡೆ ಮಾಡುತ್ತಿರುವುದರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಹೆದ್ದಾರಿ ಪಕ್ಕದಲ್ಲಿ ಹೋಟೆಲ್, ಬೇಕರಿ, ಲಾಡ್ಜ್ ಸೇರಿದಂತೆ ಇತರ ಕಟ್ಟಡಗಳಿವೆ. ಸಂಜೆ 6 ಗಂಟೆಯಾಗುತ್ತಿದ್ದಂತೆ ಹೋಟೆಲ್ಗೆ ಊಟ, ಉಪಹಾರ, ಟೀ-ಕಾಫಿ ಕುಡಿಯಲು ಬರುವ, ಲಾಡ್ಜ್ ಮತ್ತು ಬೇಕರಿಗೆ ಬರುವ ಜನರು ಫುಟ್‌ಪಾತ್‌ನಲ್ಲಿ ಅಡ್ಡಾದಿಡ್ಡಿ ನೂರಾರು ಬೈಕ್ ನಿಲ್ಲಿಸಿ ಹೋಗುತ್ತಿದ್ದಾರೆ. ಇದರಿಂದ ಜನ ಸಾಮಾನ್ಯರು ಪಾದಚಾರಿ ಮಾ ರ್ಗದಲ್ಲಿ ಸಂಚರಿಸಲು ಸಾಧ್ಯವಾಗದೆ ಹೆದ್ದಾರಿ ಮಧ್ಯೆ ದಲ್ಲಿಯೇ ಜೀವ ಭಯದಲ್ಲಿ ನಡೆದು ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೈಕ್ ನಿಲುಗಡೆ ಮಾಡುವ ಸ್ಥಳ ತಿರುವಿನಲ್ಲಿರುವುದರಿಂದ ಬಸ್, ಲಾರಿ ಸೇರಿದಂತೆ ದೊಡ್ಡ ವಾಹನಗಳು ಸುಗಮವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಸುಗಮ ಸಂಚಾರಕ್ಕೆ ಇಷ್ಟೆಲ್ಲ ತೊಂದರೆಯಾಗುತ್ತಿದ್ದರೂ ಪಟ್ಟಣ ಪೊಲೀಸರು ಯಾವುದೇ ಕ್ರಮ ತೆಗೆದು ಕೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಪಾದಚಾರಿ ಮಾರ್ಗದಲ್ಲಿ ಬೈಕ್ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಮಾಡುವುದರ ಜತೆಗೆ ವಾಹನ ಸಂಚಾರಕ್ಕೆ ತೊಂದರೆ ಮಾಡುತ್ತಿರುವವರಿಗೆ ಇನ್ನಾದರೂ ಪೊಲೀಸರು ಎಚ್ಚೆತ್ತು ರಸ್ತೆ ಸುರಕ್ಷತಾ ಪಾಠ ಹೇಳಿಕೊಡಬೇಕಿದೆ.