ಜಿಲ್ಲೆ

ರಸ್ತೆಯಲ್ಲಿ ಅಡ್ಡಬಂದ ಚಿರತೆಗೆ ಬೈಕ್ ಡಿಕ್ಕಿ

ದ್ವಿಚಕ್ರ ವಾಹನ ಸವಾರ ಮತ್ತು ಚಿರತೆಗೆ ಗಂಭೀರ ಗಾಯ



ಮಾಗಡಿ: ಹೊಸ ದ್ವಿಚಕ್ರ ವಾಹನ ಖರೀದಿಸಿ ಸಂಭ್ರಮದಲ್ಲಿ ತೆರಳುತ್ತಿದ್ದವನಿಗೆ ರಸ್ತೆಯಲ್ಲಿ ಅಡ್ಡಬಂದ ಚಿರತೆ ಸವಾರನ ಸಡಗರಕ್ಕೆ ತಣ್ಣೀರೆರೆಚಿದೆ.
ತಾಲೂಕಿನ ಕುದೂರಿನ ಕುಮಾರ್ (30) ಗುರುವಾರ ರಾಮನಗರದಿಂದ ಹೊಸ ಬೈಕ್ ಖರೀದಿಸಿ ಕುದೂರಿಗೆ ತೆರಳುವ ಮಾರ್ಗಮಧ್ಯೆ ಜೋಡುಗಟ್ಟೆ ಬಳಿ 4

ವರ್ಷದ ಚಿರತೆ ಅಡ್ಡ ಬಂದಿದ್ದು, ಬೈಕ್ ಡಿಕ್ಕಿಯಾಗಿ ಕುಮಾರ್ ನೆಲಕ್ಕೆ ಬಿದ್ದು, ಬಲಗಾಲು ಮುರಿದಿದೆ ಎನ್ನಲಾಗಿದೆ.
ಗಾಯಗೊಂಡ ಕುಮಾರ್‌ನನ್ನು ಮಾಗಡಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿರತೆಗೂ ಗಾಯ: ದ್ವಿಚಕ್ರ ವಾಹನ ಡಿಕ್ಕಿಯಾದ ಪರಿಣಾಮ ಚಿರತೆ ಸೊಂಟಕ್ಕೆ ಗಂಭೀರ ಗಾಯವಾಗಿ ರಸ್ತೆಯಲ್ಲೆ ಬಿದ್ದಿತ್ತು. ವಿಷಯ ತಿಳಿದ ವಲಯ ಅರಣ್ಯಾಧಿಕಾರಿ ಚೈತ್ರಾ ಕೂಡಲೇ ಬನ್ನೆರುಘಟ್ಟ ವೈದ್ಯರನ್ನು ಕರೆಸಿ ಚಿರತೆಗೆ ಅರಿವಳಿಕೆ ಮದ್ದು ನೀಡಿ ಚಿಕಿತ್ಸೆ ಕೊಡಿಸಿ, ಬಳಿಕ ಬನ್ನೆರುಘಟ್ಟಕ್ಕೆ ಕೊಂಡೊಯ್ಯಲಾಯಿತು.

ತೀವ್ರಗಾಯದಿಂದ ಓಡಾಡಲು ಸಾಧ್ಯವಾಗದೆ ರಸ್ತೆಯಲ್ಲೇ ನರಳಾಡುತ್ತಿದ್ದ ಚಿರತೆಯನ್ನು ನೋಡಲು ಜನರು ತಂಡೋಪತಂಡವಾಗಿ ಆಗಮಿಸಿದ್ದರು. ಈ ವೇಳೆ ಜನರನ್ನು ಚದುರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟರು.