ಜಿಲ್ಲೆ

ಬೈಕ್​ಗೆ ಹಿಂಬದಿಯಿಂದ ಕಾರು ಡಿಕ್ಕಿ; ಟೆಕ್ಕಿ ಮೃತ್ಯು

Webdesk - Manjunatha B

ಬೆಂಗಳೂರು: ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ಹೋಗುವಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಸಾಫ್ಟ್‌ವೇರ್ ಇಂಜಿನಿಯರ್ ಮೃತಪಟ್ಟಿರುವ ಪ್ರಕರಣ ಬೆಳ್ಳಂದೂರಿನಲ್ಲಿ ನಡೆದಿದೆ.

ಕಸವನಹಳ್ಳಿ ನಿವಾಸಿ ಅಮಿತ್ ಭಾರ್ಗವ್(46) ಮೃತ ದುರ್ದೈವಿ. ಕಸವನಹಳ್ಳಿ ಮುಖ್ಯರಸ್ತೆಯ ಅಮೃತ್ ಕಾಲೇಜು ಬಳಿ ಗುರುವಾರ ತಡರಾತ್ರಿ 12:30ರ ಸುಮಾರಿಗೆ ಈ ಘಟನೆ ನಡೆದಿದೆ. ಅಪಘಾತದ ಬಳಿಕ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಚಾಲಕನ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಪೊಲೀಸ್​​ ಅಧಿಕಾರಿಗಳು ತಿಳಿಸಿದ್ದಾರೆ.

ಹರಿಯಾಣ ಮೂಲದವರು

ಹರಿಯಾಣ ಮೂಲದ ಅಮಿತ್ ಭಾರ್ಗವ್, ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್. ನಗರದ ಪ್ರತಿಷ್ಠಿತ ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಸವನಹಳ್ಳಿಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಗುರುವಾರ ರಾತ್ರಿ ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಾಸಾಗುವಾಗ ಕಸವನಹಳ್ಳಿ ಮುಖ್ಯರಸ್ತೆಯ ಅಮೃತ್ ಕಾಲೇಜು ಬಳಿ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಏಕಾಏಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಅಮಿತ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಸ್ಥಳೀಯರ ನೆರವಿನಿಂದ ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು, ಅಮಿತ್ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಈ ಸಂಬಂಧ ಬೆಳ್ಳಂದೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.