ಬಂಧಿತ ಆರೋಪಿ ಮಹಮ್ಮದ್ ವಸೀಂ 
ಜಿಲ್ಲೆ

ಎಟಿಎಂನಲ್ಲಿ ಕಳ್ಳತನಕ್ಕೆ ಯತ್ನ, ಬಿಹಾರ ಮೂಲದ ಯುವಕ ಬಂಧನ

ಶಿವಮೊಗ್ಗ: ರಾಜ್ಯದ ಹಲವೆಡೆ ಬ್ಯಾಂಕ್ ದರೋಡೆ, ರಾಬರಿ ಸುದ್ದಿಗಳು ಕೇಳಿಬರುತ್ತಿರುವ ಬೆನ್ನಲ್ಲೇ ಶಿವಮೊಗ್ಗ ಹೃದಯ ಭಾಗದ ನೆಹರು ರಸ್ತೆಯ ಎಟಿಎಂನಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಬಿಹಾರ ಮೂಲದ ಯುವಕನೊಬ್ಬ ಕೆಲವೇ ಗಂಟೆಗಳಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಬಿಹಾರದ ಸಾರಸ್ ಜಿಲ್ಲೆ ಜಲೈ ಗ್ರಾಮದ ಮಹಮ್ಮದ್ ವಸೀಂ(22) ಬಂಧಿತ ಆರೋಪಿ. ಭಾನುವಾರ ರಾತ್ರಿ 10.45ರ ಸುಮಾರಿಗೆ ಬ್ಯಾಗ್, ತಲೆಗೆ ಟೋಪಿ ಧರಿಸಿ ನೆಹರು ರಸ್ತೆಗೆ ಬಂದಿದ್ದ ಆರೋಪಿ ಕೆನರಾ ಬ್ಯಾಂಕ್‌ನ ಎಟಿಎಂ ಯಂತ್ರ ಮುರಿಯಲು ಯತ್ನಿಸಿದ್ದ. ಎಟಿಎಂ ಕೇಂದ್ರದಲ್ಲಿ ಎರಡು ಎಟಿಎಂ ಮೆಷಿನ್‌ಗಳಿದ್ದು ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತ ಒಳ ಬಂದ ಆತ, ಮೊದಲು ಒಂದು ಯಂತ್ರ ಪರಿಶೀಲಿಸಿದ್ದ. ಬಳಿಕ ಪಕ್ಕದ ಎಟಿಎಂ ಯಂತ್ರವನ್ನು ಚೆಕ್ ಮಾಡಿ ಅದರ ಲಾಕ್‌ಗಳನ್ನು ತೆಗೆದು ಹಣ ಕದಿಯಲು ಯತ್ನಿಸಿದ್ದ. ಬಳಿಕ ಪಕ್ಕದ ಎಟಿಎಂ ಮೆಷಿನ್ನಿನ ಲಾಕ್ ತೆರೆಯಲು ಪ್ರಯತ್ನಿಸಿದ್ದ. ಆಗ ಎಟಿಎಂ ಕೇಂದ್ರದ ಒಳಗೆ ಸೈರನ್ ಆನ್ ಆಗಿದೆ. ಬೆಚ್ಚಿದ ಕಳ್ಳ ಅಲ್ಲಿಂದ ಪರಾರಿಯಾಗಿದ್ದ.

ಎಟಿಎಂನಲ್ಲಿ ಕಳ್ಳತನ ಯತ್ನದ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಬ್ಯಾಂಕ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ, ಸಿಸಿಟಿವಿ ಪರಿಶೀಲಿಸಿದ್ದರು. ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಬಾಬು ಆಂಜನಪ್ಪ ಅವರ ಮೇಲ್ವಿಚಾರಣೆಯಲ್ಲಿ ಕೋಟೆ ಠಾಣೆ ಇನ್‌ಸ್ಪೆಕ್ಟರ್ ಹರೀಶ್‌ಪಟೇಲ್ ನೇತೃತ್ವದಲ್ಲಿ ಪಿಎಸ್‌ಐ ಸಂತೋಷ್ ಭಾಗೋಜಿ, ಎಎಸ್‌ಐ ಹರ್ಷ ಮತ್ತು ಸಿಬ್ಬಂದಿಗಳಾದ ಕಿಶೋರ್, ಆಂಜಿನಪ್ಪ, ಕಾಂತರಾಜ್, ಪ್ರಕಾಶ್ ಹಾಗೂ ವಾಹನದ ಚಾಲಕ ಸೋಮು ಅವರನ್ನೊಳಗೊಂಡ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದೆ. ಘಟನೆ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು, ಎಟಿಎಂ ಮೆಷಿನ್‌ಗಳಿಗೆ ಹಾನಿಯಾಗಿರುವ ಹಿನ್ನೆಲೆ ಎಟಿಎಂ ಕೇಂದ್ರವನ್ನು ಬಂದ್ ಮಾಡಲಾಗಿದೆ.