ಜಿಲ್ಲೆ

ಬಿಗ್‌ಬಾಸ್ ಮತ್ತೆ ಶುರು!

ಗಂಗಾಧರ ಬಿ ವಿ

ಬುಧವಾರ ಮಧ್ಯರಾತ್ರಿಯೇ ‘ಜಾಲಿವುಡ್ ಸ್ಟುಡಿಯೋ’ ಬೀಗ ತೆರವು

ಡಿಸಿ, ಎಸ್ಪಿ ಸಮ್ಮುಖದಲ್ಲೇ ಕಾರ್ಯಾಚರಣೆ

* ಗಂಗಾಧರ ಬೈರಾಪಟ್ಟಣ ರಾಮನಗರ

ಜಾಲಿವುಡ್ ಸ್ಟುಡಿಯೋಸ್‌ಗೆ ಹಾಕಲಾಗಿದ್ದ ಬೀಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಧ್ಯ ಪ್ರವೇಶದಿಂದ ಬುಧವಾರ ಮಧ್ಯರಾತ್ರಿಯೇ ತೆರವಾಗಿದ್ದು, ಇದರೊಂದಿಗೆ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ನಿರಾಳಗೊಂಡಿದೆ.

ಬಿಗ್‌ಬಾಸ್ ಚಿತ್ರೀಕರಣ ನಡೆಯುತ್ತಿದ್ದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಜಾಲಿವುಡ್ ಸ್ಟುಡಿಯೋಸ್ ಬಂದ್ ಮಾಡಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಉಲ್ಲಂಘನೆ ಆರೋಪದಡಿ ಆದೇಶ ಹೊರಡಿಸಿದ ಬೆನ್ನಲ್ಲೇ ಜಿಲ್ಲಾಡಳಿತ, ಮಂಗಳವಾರವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸ್ಟುಡಿಯೋಸ್‌ಗೆ ಬೀಗ ಜಡಿದಿತ್ತು. ಇದರಿಂದ ಬಿಗ್‌ಬಾಸ್ ಸ್ಪರ್ಧೆ ಸಹ ಮೊಟಕುಗೊಂಡು, ಸ್ಪರ್ಧಿಗಳು ರೆಸಾರ್ಟ್ ಸೇರಿದ್ದರು. ಇದು ವಿವಾದದ ಸ್ಪರೂಪ ಪಡೆದುಕೊಂಡು ರಾಜ್ಯ ಸರ್ಕಾರ ಮತ್ತು ತಮ್ಮ ಸುತ್ತಲೇ ಗಿರಕಿ ಹೊಡೆಯುತ್ತಿದ್ದಂತೆ ಎಚ್ಚೆತ್ತ ಡಿಸಿಎಂ ಡಿ.ಕೆ.ಶಿವಕುಮಾರ್, ಬುಧವಾರ ತಡರಾತ್ರಿಯೇ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿ, ಜಾಲಿವುಡ್‌ಗೆ ಹಾಕಲಾಗಿದ್ದ ಬೀಗವನ್ನು ತೆರವುಗೊಳಿಸಿ, ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ.

ಅವರು ತಪ್ಪು ಮಾಡಿದ್ದಾರೆ

ನೀರನ್ನು ಶುದ್ಧೀಕರಿಸಿ ಹೊರ ಬಿಡದೇ ಇರುವುದು ಸೇರಿ ಪ್ರಮುಖ 6 ಕಾರಣಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್‌ನಲ್ಲಿ ನೀಡಿದೆಯಾದರೂ, ಸ್ಟುಡಿಯೋಸ್ ಆರಂಭಕ್ಕೂ ಮುನ್ನ ನಿರಾಕ್ಷೇಪಣಾ ಪತ್ರ ಮತ್ತು ಚಾಲನಾ ಸಮ್ಮತಿ ಪತ್ರ (ಸಿಎಫ್‌ಒ) ಪಡೆದುಕೊಳ್ಳದೇ ಇರುವುದು ಪ್ರಮುಖ ಕಾರಣ. ಇದೊಂದು ಅನುಮತಿ ಪಡೆದುಕೊಂಡು, ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನು ಪಾಲನೆ ಮಾಡಿದ್ದರೆ, ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಆದರೆ ನಿಯಮ ಮೀರಿರುವ ಜಾಲಿವುಡ್ ಸ್ಟುಡಿಯೋಸ್‌ಅನ್ನು ಸುಮ್ಮನೆ ಬಿಡಲು ಮಾಲಿನ್ಯ ನಿಯಂತ್ರಣ ಮಂಡಳಿ ಸಿದ್ಧವಿಲ್ಲ. ಅವರು ತಪ್ಪು ಮಾಡಿದ್ದಾರೆ, ಅದನ್ನು ಸರಿಪಡಿಸಿಕೊಳ್ಳಬೇಕು ಎನ್ನುವುದು ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ ಅವರ ನಿಲುವು. ತಪ್ಪು ತಲೆ ಹೋಗುವಂಥದ್ದೇನಲ್ಲ, ನಿಯಮದಂತೆ ಚಾಲನಾ ಸಮ್ಮತಿ ಪತ್ರ ಪಡೆದುಕೊಂಡು, ದಂಡ ಪಾವತಿಸಬೇಕಿದೆ ಎನ್ನುತ್ತಾರೆ ನರೇಂದ್ರಸ್ವಾಮಿ. ಇದನ್ನು ಅನುಸರಿಸಿದರೆ, ಸದ್ಯಕ್ಕೆ ಎದುರಾಗಿರುವ ಸಮಸ್ಯೆಯಿಂದ ಜಾಲಿವುಡ್‌ಮುಕ್ತಿ ಹೊಂದಬಹುದಾಗಿದೆ.

ಬಿಗ್‌ಬಾಸ್‌ಗಿಲ್ಲ ತಡೆ

ಬುಧವಾರ ಮಧ್ಯರಾತ್ರಿಯೇ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಮತ್ತು ಎಸ್‌ಪಿ ಆರ್.ಶ್ರೀನಿವಾಸಗೌಡ ಮುಂದೆ ನಿಂತು ಜಾಲಿವುಡ್ ಸ್ಟುಡಿಯೋಸ್ ಬೀಗ ತೆಗೆಸಿದ್ದಾರೆ. ಒಂದು ವೇಳೆ ಬಿಗ್‌ಬಾಸ್ ಚಿತ್ರೀಕರಣ ಸ್ಥಗಿತಗೊಂಡರೆ, ಇದರ ಕಳಂಕ ರಾಜ್ಯ ಸರ್ಕಾರಕ್ಕೆ ಅಂಟಿಕೊಳ್ಳಲಿದೆ ಎನ್ನುವ ಆತಂಕದ ಕಾರಣ ಸದ್ಯದ ಮಟ್ಟಿಗೆ ಬಿಗ್‌ಬಾಸ್ ಸ್ಪರ್ಧೆಗೆ ಯಾವುದೇ ಅಡೆತಡೆ ಇಲ್ಲ. ಇದರ ಮಧ್ಯದಲ್ಲಿಯೇ ಇರುವ ಎಲ್ಲ ಕಾನೂನು ತೊಡಕುಗಳನ್ನು ಸರಿಪಡಿಸಿಕೊಂಡು, ಮಾಲಿನ್ಯ ನಿಯಂತ್ರಣ ಮಂಡಳಿಯ ಸೂಚನೆಗಳನ್ನು ಸಂಸ್ಥೆಯು ಅಳವಡಿಸಿಕೊಂಡರೆ ಎಲ್ಲವೂ ಸರಾಗವಾಗಲಿದೆ.

===

ರಾಜ್ಯದ ಉಪಮುಖ್ಯಮಂತ್ರಿಯಾಗಿ ಜನರ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಅವರು ನಿರ್ಧಾರವನ್ನು ಕೈಗೊಂಡಿದ್ದಾರೆ. ಇದರಲ್ಲಿ ತಪ್ಪೇನು?. ಜಾಲಿವುಡ್ ನಿಯಮವನ್ನು ಮೀರಿದೆ. ಈ ನಿಟ್ಟಿನಲ್ಲಿ ನಾವು ಕ್ರಮ ಕೈಗೊಂಡಿದ್ದೇವೆ. ಇದನ್ನು ಸರಿಪಡಿಸಿಕೊಳ್ಳುವ ಅವಕಾಶವೂ ಕಾನೂನಿನಲ್ಲಿದೆ. ಮಂಡಳಿ ಕ್ರಮ ಕೈಗೊಂಡಿರುವುದು ಜಾಲಿವುಡ್ ವಿರುದ್ಧವೇ ಹೊರತು ಬಿಗ್‌ಬಾಸ್ ವಿರುದ್ಧ ಅಲ್ಲ.ಪಿ.ಎಂ.ನರೇಂದ್ರ ಸ್ವಾಮಿ,ಅಧ್ಯಕ್ಷರು, ಮಾಲಿನ್ಯ ನಿಯಂತ್ರಣ ಮಂಡಳಿ ===

ಬಿಗ್‌ಬಾಸ್ ಅಷ್ಟೇ ಚಿತ್ರೀಕರಣ!

ಜಾಲಿವುಡ್ ಸ್ಟುಡಿಯೋಸ್‌ಗೆ ಒಟ್ಟು ನಾಲ್ಕು ಪ್ರವೇಶ ದ್ವಾರಗಳಿವೆ. ಮಂಗಳವಾರ ಎಲ್ಲ ದ್ವಾರಗಳನ್ನು ಜಿಲ್ಲಾಡಳಿತ ಸೀಲ್ ಮಾಡಿತ್ತು. ಬುಧವಾರ ಮಧ್ಯರಾತ್ರಿ ‘ಸಿ’ ಗೇಟ್ ಬೀಗ ಮುದ್ರೆಯನ್ನು ತೆರವುಗೊಳಿಸಲಾಗಿದ್ದು, ಉಳಿದ ಎ , ಬಿ ಮತ್ತು ಡಿ ಗೇಟ್‌ಗಳ ಮುದ್ರೆಯನ್ನು ತೆಗೆದಿಲ್ಲ. ಅಲ್ಲದೆ, ಗುರುವಾರ ಬಿಗ್‌ಬಾಸ್ ಚಿತ್ರೀಕರಣ ಮಾತ್ರ ನಡೆದಿದ್ದು, ಉಳಿದಂತೆ ಸ್ಟುಡಿಯೋಸ್‌ನ ಇತರ ಚಟುವಟಿಕೆಗಳು ಸ್ಥಗಿತಗೊಂಡಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.