ಹುಬ್ಬಳ್ಳಿ: ಯೋಗ ಗುರು ಬಾಬಾ ರಾಮದೇವ್ ನೇತೃತ್ವದಲ್ಲಿ ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ನಡೆಯುತ್ತಿರುವ ಉಚಿತ ಬೃಹತ್ ಯೋಗ ಶಿಬಿರದ 2ನೇ ದಿನವಾದ ಶುಕ್ರವಾರ ಹುಬ್ಬಳ್ಳಿ-ಧಾರವಾಡದ ವಿವಿಧ ಬಡಾವಣೆಗಳ ಸಾವಿರಾರು ಜನರು ಕುಟುಂಬ ಸಮೇತರಾಗಿ ಪಾಲ್ಗೊಳ್ಳುವ ಮೂಲಕ ಯೋಗಾಸಕ್ತಿ ಪ್ರದರ್ಶಿಸಿದರು.
ವಿಆರ್ಎಲ್ ಲಾಜಿಸ್ಟಿಕ್ಸ್, ಕನ್ನಡದ ನಂ. 1 ಪತ್ರಿಕೆ ‘ವಿಜಯವಾಣಿ’, ದಿಗ್ವಿಜಯ 24x7 ಸುದ್ದಿವಾಹಿನಿ, ಪವರ್ ನ್ಯೂಸ್ ಹಾಗೂ ಪತಂಜಲಿ ಯೋಗ ಪೀಠದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಶಿಬಿರದ 2ನೇ ದಿನದ ಕಾರ್ಯಕ್ರಮವನ್ನು ಹು-ಧಾ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಅರವಿಂದ ಬೆಲ್ಲದ ಉದ್ಘಾಟಿಸಿದರು.
ಯೋಗ ಗುರುವಿನ ಕಿವಿಮಾತು: ಪ್ರತಿಯೊಬ್ಬರ ವ್ಯಕ್ತಿತ್ವ ಬೇರೆ ಬೇರೆಯಾಗಿರುತ್ತದೆ. ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಯೋಗಕ್ಕೆ ಇದೆ. ಪ್ರಾಣಾಯಾಮ, ಯೋಗದಿಂದ ದೇಹ ಮತ್ತು ಮನಸ್ಸು ಒತ್ತಡ ಮುಕ್ತವಾಗಿ ಚೈತನ್ಯಭರಿತವಾಗುತ್ತದೆ. ದೇಹದಲ್ಲಿ ದೈವೀಶಕ್ತಿ ನಿರ್ಮಾಣಗೊಳ್ಳುತ್ತದೆ ಎಂದು ಬಾಬಾ ರಾಮದೇವ್ ಹೇಳಿದರು.
ನಿತ್ಯ ಯೋಗಾಭ್ಯಾಸದ ಜತೆಗೆ ಆಹಾರ ಸೇವನೆಯಲ್ಲಿ ನಿಯಂತ್ರಣ ಅಗತ್ಯ. ದೇಹಕ್ಕೆ ಬೇಡವಾದ ಒಂದು ತುತ್ತು ಆಹಾರ ಅಥವಾ ಒಂದು ಹನಿ ನೀರು ಹೊಟ್ಟೆ ಸೇರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಋಣಾತ್ಮಕ ವಿಚಾರಗಳು ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಟೈ ಸದಸ್ಯರ ಭೇಟಿ
ಟೈ (ದಿ ಇಂಡಸ್ ಎಂಟರಪ್ರೀನರ್ಸ್) ತಂಡದ ಸದಸ್ಯರು ಬೆಳಗ್ಗೆ ಯೋಗ ಶಿಬಿರಕ್ಕೆ ಆಗಮಿಸಿ, ಬಾಬಾ ರಾಮದೇವ್ ಗುರೂಜಿ ಅವರಿಂದ ಆಶೀರ್ವಾದ ಪಡೆದರು. ಟೈ ಅಧ್ಯಕ್ಷ ಶಶಿಧರ ಶೆಟ್ಟರ್, ಸಂಚಾಲಕ ವಿಜಯ ಸೆಹಗಲ್, ಪ್ರವೀಣ ಅಗಡಿ, ಗಿರೀಶ ಮಾನೆ, ಸತೀಶ ಮುನವಳ್ಳಿ, ಕುನಾಲ್ ಷಾ, ವಿಪುಲ್ ಬುಟಾಡಾ ಮತ್ತಿತರರಿದ್ದರು. ಟೈ ಹುಬ್ಬಳ್ಳಿ ವತಿಯಿಂದ ಏರ್ಪಡಿಸಿರುವ ‘ಉದ್ಯಮಶೀಲತಾ ಶೃಂಗಸಭೆ’ಯ ಅಂಗವಾಗಿ ಫೆ. 2ರ ಸಂಜೆ 6 ಗಂಟೆಗೆ ಹೋಟೆಲ್ ಡೆನ್ನಿಸನ್ಸ್ನಲ್ಲಿನ ಈವ್ನಿಂಗ್ ವಿಥ್ ಲೇಜೆಂಡ್ಸ್ ಕಾರ್ಯಕ್ರಮದಲ್ಲಿ ಬಾಬಾ ರಾಮದೇವ್ ಗುರೂಜಿ ಹಾಗೂ ಮೋಹನದಾಸ ಪೈ ಅವರು ಭಾಗವಹಿಸಲಿದ್ದಾರೆ.
ಕೃಷಿಯಲ್ಲಿ ರಾಸಾಯನಿಕ, ಕೀಟನಾಶಕಗಳ ಬಳಕೆಯಿಂದ ತಿನ್ನುವ ಆಹಾರ ವಿಷವಾಗುತ್ತಿದೆ. ಸಾಂಪ್ರದಾಯಿಕ ಸೆಗಣಿ ಗೊಬ್ಬರ ಬಳಸಿ, ಆಹಾರ ಉತ್ಪಾದಿಸಬೇಕು. ಪತಂಜಲಿ ಯೋಗ ಪೀಠ ಕೃಷಿಯಲ್ಲಿ ಬದಲಾವಣೆಗೆ ಮುಂದಾಗಿರುವುದು ಸ್ವಾಗತಾರ್ಹ. ದೇಶದೆಲ್ಲೆಡೆ ಯೋಗಾಸಕ್ತರ ಸಂಖ್ಯೆ ಹೆಚ್ಚುತ್ತಿದೆ. ವಿಶ್ವದ ಅನೇಕ ದೇಶಗಳಲ್ಲಿ ಯೋಗ ಶಿಬಿರಗಳು ನಡೆಯುತ್ತಿವೆ. ಆರೋಗ್ಯ ಸಮಾಜ ಸೃಷ್ಟಿಯಾಗುತ್ತಿದೆ. | ಶ್ರೀ ಶಿವಯೋಗಿ ಶರಣ ಸ್ವಾಮೀಜಿ