ಜಿಲ್ಲೆ

ಜನಾಶೀರ್ವಾದದಿಂದ ದೊಡ್ಡ ಗೆಲುವು: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Haveri - Desk - Ganapati Bhat

ಶಿಗ್ಗಾಂವಿ(ಗ್ರಾ): ಕೆಲವರು ರಾಜಕಾರಣವನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಈ ಕ್ಷೇತ್ರದ ರಾಜಕಾರಣ ಯಾವುದೇ ವ್ಯಕ್ತಿಯ ಕಪಿಮುಷ್ಠಿಯಲ್ಲಿಲ್ಲ, ಬದಲಾಗಿ ಜನರ ಕಪಿಮುಷ್ಠಿಯಲ್ಲಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಜನರ ಆಶೀರ್ವಾದ ದೊಡ್ಡ ಪ್ರಮಾಣದಲ್ಲಿ ನನಗೆ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಶಿಗ್ಗಾಂವಿ-ಸವಣೂರ ರಸ್ತೆಯಲ್ಲಿನ ಬಿಜೆಪಿ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸತತ ನಾಲ್ಕು ಬಾರಿ ಗೆಲ್ಲಿಸಿದ ಜನತೆಗೆ ಹೃದಯಪೂರ್ವಕವಾದ ಧನ್ಯವಾದಗಳು. ಕಳೆದ ಮೂರು ಚುನಾವಣೆಯಲ್ಲಿ ಬೆಂಬಲಿಸದವರು ಈ ಬಾರಿ ಕ್ಷೇತ್ರದ ಅಭಿವೃದ್ಧಿ ನೋಡಿ ಬೆಂಬಲಿಸಿದ್ದಾರೆ. ಹೀಗಾಗಿ ದೊಡ್ಡ ಪ್ರಮಾಣದ ಅಂತರದ ಜಯವಾಗಿದೆ ಎಂದರು.

ದ್ವೇಷದಿಂದ ಏನನ್ನೂ ಗೆಲ್ಲಲು ಸಾಧ್ಯವಿಲ್ಲ. ಪ್ರೀತಿಯಿಂದ ಮಾತ್ರ ಜಗತ್ತನ್ನು, ಜನರನ್ನು ಗೆಲ್ಲಲು ಸಾಧ್ಯ. ನಾನು ಎಲ್ಲ ಸಮುದಾಯವನ್ನು ಸಮಾನವಾಗಿ ನೋಡಿದ್ದೇನೆ. ಸಮುದಾಯಗಳ ಮಧ್ಯೆ ಪ್ರೀತಿ, ವಿಶ್ವಾಸದ ಬಾಂಧವ್ಯ ಬೆಳೆಸಲು ಪ್ರಯತ್ನಿಸಿದ್ದೇನೆ. ಪ್ರತಿ ಚುನಾವಣೆಯಲ್ಲಿ ಪೈಪೋಟಿ ಇದ್ದೇ ಇರುತ್ತದೆ. ಆದರೆ, ಜನರ ಮಧ್ಯೆ ಇದ್ದು 59 ತಿಂಗಳು ಅಭಿವೃದ್ಧಿ ಮಾಡಿ, ಕೇವಲ ಒಂದು ತಿಂಗಳು ಮಾತ್ರ ರಾಜಕಾರಣ ಮಾಡಬೇಕು ಎಂದರು.

ರಾಜಕಾರಣದಲ್ಲಿ ಸ್ಥಾನಗಳು ಬರುತ್ತವೆ, ಹೋಗುತ್ತವೆ ಆದರೆ, ಆ ಸ್ಥಾನದ ಗೌರವ ಉಳಿಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ನಿಮ್ಮ ಆಶೀರ್ವಾದಿಂದ ಶಾಸಕನಾಗಿ, ಸಚಿವನಾಗಿ, ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಎಲ್ಲ ಸಂದರ್ಭದಲ್ಲಿಯೂ ನಿಮ್ಮ ಗೌರವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ರೈತರ ಮಕ್ಕಳಿಗಾಗಿ ವಿದ್ಯಾರ್ಥಿ ವೇತನ, ರೈತರಿಗಾಗಿ ಯಶಸ್ವಿನಿ ಯೋಜನೆ, ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ, ಯುವಕರಿಗಾಗಿ ಸ್ವಾಮಿ ವಿವೇಕಾನಂದ ಯೋಜನೆ, ಎಲ್ಲಕ್ಕಿಂತ ಹೆಚ್ಚಾಗಿ ಶಿಕ್ಷಣ ಮತ್ತು ಆರೋಗ್ಯಕ್ಕಾಗಿ 9350 ಶಾಲಾ ಕೊಠಡಿಗಳನ್ನು ಒಂದೇ ವರ್ಷದಲ್ಲಿ ನಿರ್ವಿುಸಲಾಗಿದೆ. ಆಸ್ಪತ್ರೆಗಳನ್ನು ಮೇಲ್ದರ್ಜೆರಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಿವರಾಜ ಸಜ್ಜನ, ಶ್ರೀಕಾಂತ ದುಂಡಿಗೌಡ್ರ, ಶಿವಾನಂದ ಮ್ಯಾಗೇರಿ, ಗಂಗಾಧರ ಬಾಣದ ಮಾತನಾಡಿದರು. ನರಹರಿ ಕಟ್ಟಿ, ರೇಣುಕನಗೌಡ ಪಾಟೀಲ, ಉಮೇಶ ಅಂಗಡಿ, ಬಿ.ಟಿ. ಇನಾಮತಿ, ಶೋಭಾ ನಿಸ್ಸೀಮಗೌಡ್ರ, ಶಶಿಧರ ಹೊಣ್ಣನ್ನವರ, ದೇವಣ್ಣ ಚಾಕಲಬ್ಬಿ, ಪ್ರತೀಕ ಕೋಳೆಕರ, ಮಧುಕುಮಾರ ಜಂಗಳಿ, ನವೀನ ಸಾಸನೂರ, ಪ್ರವೀಣ ಗುಳಣ್ಣವರ ಮತ್ತಿತರರು ಉಪಸ್ಥಿತರಿದ್ದರು.

ವಾರದಲ್ಲಿ ಎರಡು ದಿನ ಕ್ಷೇತ್ರ ಭೇಟಿ

ನಮ್ಮ ಕ್ಷೇತ್ರದ ಅಭಿವೃದ್ಧಿ ನಿಲ್ಲುವುದಿಲ್ಲ. ನಾವು ಕೈಗೊಂಡಿರುವ ಕೆಲಸಗಳು ಜನಪರ ಕೆಲಸಗಳು ಅವು ಪೂರ್ಣವಾಗಲೇ ಬೇಕು. ಇದು ಪ್ರಜಾಪ್ರಭುತ್ವ. ಪ್ರತಿಯೊಬ್ಬರೂ ತಮ್ಮ ದುಡಿಮೆಯಿಂದ ಸರ್ಕಾರದ ಬೊಕ್ಕಸ ತುಂಬಿಸುತ್ತಾರೆ. ಆದ್ದರಿಂದ ಇದು ಎಲ್ಲರ ಸರ್ಕಾರ. ನನ್ನ ಕ್ಷೇತ್ರದ ಅಭಿವೃದ್ಧಿ ರಥಕ್ಕೆ ಅಡ್ಡಿಪಡಿಸಿದರೆ ಸಹಿಸುವುದಿಲ್ಲ. ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುವುದಕ್ಕೆ ಬಿಡುವುದಿಲ್ಲ. ಮುಖ್ಯಮಂತ್ರಿಯಾಗಿದ್ದಾಗ ಎರಡು ವರ್ಷ ಕ್ಷೇತ್ರದ ಜನರನ್ನು ಭೇಟಿ ಮಾಡಲು ಆಗಿರಲಿಲ್ಲ. ಇನ್ನು ಮುಂದೆ ವಾರಕ್ಕೆ ಎರಡರಿಂದ ಮೂರು ದಿನ ಕ್ಷೇತ್ರದಲ್ಲಿದ್ದು, ಪ್ರತಿ ಹಳ್ಳಿ ಹಳ್ಳಿಗೂ ಭೇಟಿ ನೀಡುತ್ತೇನೆ ಎಂದು ಮಾಜಿ ಸಿಎಂ ಬೊಮ್ಮಾಯಿ ಹೇಳಿದರು.