ಜಿಲ್ಲೆ

ಗುಡ್ಡ ಕುಸಿದು ಮನೆಯಂಗಳಕ್ಕೇ ಜಾರಿ ಬಿದ್ದ ಬಂಡೆ; ಅಪಾಯದಲ್ಲಿದೆ ಗುಡ್ಡದ ಮೇಲಿನ ಶಾಲೆ..

ಉತ್ತರಕನ್ನಡ: ಭಾರಿ ಮಳೆಗೆ ಗುಡ್ಡವೊಂದು ಕುಸಿದಿದ್ದು, ಅದರ ಮೇಲಿನ ಬಂಡೆಯೊಂದು ಜಾರಿ, ಕೆಳಗಿರುವ ಮನೆಯೊಂದರ ಅಂಗಳಕ್ಕೆ ಬಂದು ಬಿದ್ದಿದ್ದು, ಭಾರಿ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿಹೋಗಿದೆ.

ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಕಾವೂರಿನಲ್ಲಿ ಈ ಘಟನೆ ಸಂಭವಿಸಿದೆ. ಇಲ್ಲಿನ ಸುರೇಶ್ ಗೌಡ ಎಂಬವರ ಮನೆಯ ಪಕ್ಕದಲ್ಲೇ ಇರುವ ಗುಡ್ಡ ಭಾರಿ ಮಳೆಯಿಂದಾಗಿ ಕುಸಿದಿದೆ. ಪರಿಣಾಮವಾಗಿ, ಬಂಡೆಯೊಂದು ಉರುಳಿ ಇವರ ಮನೆಯಂಗಳಕ್ಕೆ ಬಂದು ಬಿದ್ದಿದೆ. ಅದೃಷ್ಟವಶಾತ್ ಅನಾಹುತವೇನೂ ಸಂಭವಿಸದ್ದರಿಂದ ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.

ಈ ಗುಡ್ಡದ ಮೇಲಿನ ಪ್ರದೇಶದಲ್ಲಿ ಸರ್ಕಾರಿ ಶಾಲೆಯೊಂದಿದ್ದು, ಅದಕ್ಕೆ ಅಪಾಯ ಸಂಭವಿಸುವ ಆತಂಕವಿದೆ. ಕಳೆದ ವರ್ಷವೂ ಇದೇ ಪ್ರದೇಶದಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಸಲ ಸೂಕ್ತ ಮುನ್ನೆಚ್ಚರಿಕೆ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.