ಗೌರಿಬಿದನೂರು: ಜು.12ರಂದು ಬೃಹತ್ ಲೋಕ ಅದಾಲತ್ ಆಯೋಜಿಸಲಾಗಿದೆ. ತಾಲೂಕಿನ ಜನತೆ ಇದರ ಸದ್ಬಳಕೆ ಮಾಡಿಕೊಂಡು ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಬಹುದು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶೆ ಗೀತಾ ಕುಂಬಾರ್ ತಿಳಿಸಿದರು.
ನ್ಯಾಯಾಲಯ ಆವರಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಭೂಮಿ ಬೆಲೆ ಹೆಚ್ಚಾಗುತ್ತಿದ್ದು, ಹಾಗಾಗಿ ಜಮೀನಿಗೆ ಸಂಬಂಧಿಸಿದ ಹೆಚ್ಚು ಪ್ರಕರಣಗಳೂ ಹೆಚ್ಚು ದಾಖಲಾಗುತ್ತಿವೆ. ಕಕ್ಷಿದಾರರು ಲೋಕ ಅದಾಲತ್‌ನಲ್ಲಿ ಭಾಗವಹಿಸಿ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಬಹುದು. ಇದರಿಂದ ಅಮೂಲ್ಯ ಸಮಯ, ಹಣ ಉಳಿಯುವ ಜತೆಗೆ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ವಿವಾಹ ಮತ್ತು ವಿಚ್ಚೇದನ ಸಮಸ್ಯೆ, ಬ್ಯಾಂಕ್, ಸಾಲದ, ಭೂಮಿ ವಿಭಾಗ, ಪಿತ್ರಾರ್ಜಿತ ಆಸ್ತಿ, ಕೌಟುಂಬಿಕ ಸಮಸ್ಯೆಯಂತಹ ಇನ್ನಿತರ ಪ್ರಕರಣಗಳನ್ನೂ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗುವುದು. ಮಹಿಳೆ, ಅಂಗವಿಕಲರು, ವಿಧವೆಯರಿಗೆ ಶುಲ್ಕವಿಲ್ಲದೆ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಡಲಾಗುವುದು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಗಣೇಶ್, ಹೆಚ್ಚುವರಿ ನ್ಯಾಯಾಧೀಶೆ ಪುಷ್ಪಾ ಇದ್ದರು.