ಜಿಲ್ಲೆ

ದಸಂಸ ಬಣಗಳ ಒಗ್ಗೂಡುವಿಕೆಗೆ ಬೆಂಗಳೂರಿನಲ್ಲಿ ಡಿ.6 ರಂದು ಬೃಹತ್ ಸಮಾವೇಶ

ಮೈಸೂರು: ವಿವಿಧ ಬಣಗಳಾಗಿ ಹರಿದು ಹಂಚಿ ಹೋಗಿರುವ ದಲಿತ ಸಂಘರ್ಷ ಸಮಿತಿಗಳನ್ನು (ದಸಂಸ) ಒಗ್ಗೂಡಿಸಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನವಾದ ಡಿ.6 ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ದಲಿತ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ದಸಂಸ ವಿವಿಧ ಬಣಗಳಾಗಿ ಹರಿದು ಹಂಚಿ ಹೋದ ನಂತರ ಸಂಘಟನೆಯ ಶಕ್ತಿ ಕುಂದಿ ಹೋಗಿದೆ. ಹೀಗಾಗಿ ಎಲ್ಲ ಬಣಗಳನ್ನು ಒಗ್ಗೂಡಿಸಿ ಮತ್ತೆ ಬಲಿಷ್ಠ ಸಂಘಟನೆಯಾಗಿ ರೂಪಿಸುವ ಉದ್ದೇಶ ಹೊಂದಿದ್ದೇವೆ ಎಂದು ದಲಿತ ಸಂಘಟನೆಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಮುಖಂಡರಾದ ಮಾವಳ್ಳಿ ಶಂಕರ್, ಎನ್. ವೆಂಕಟೇಶ್, ಗುರುಪ್ರಸಾದ್ ಕೆರೆಗೋಡು, ಡಾ. ಡಿ.ಜಿ.ಸಾಗರ್, ಲಕ್ಷ್ಮೀನಾರಾ ಯಣ ನಾಗವಾರ, ಅಣ್ಣಯ್ಯ, ಎಂ. ಸೋಮಶೇಖರ್, ಜಿಗಣಿ ಶಂಕರ್, ಬೆಟ್ಟಯ್ಯ ಕೋಟೆ, ಹಿಂದೂಧರ ಹೊನ್ನಾಪುರ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮಾವೇಶದಲ್ಲಿ ದಲಿತ ಸಮುದಾಯದ ಪ್ರಮುಖರಾದ ದೇವನೂರ ಮಹಾದೇವ, ಎಸ್. ಮರಿಸ್ವಾಮಿ, ಹಿಂದೂಧರ ಹೊನ್ನಾಪುರ, ರಾಮದೇವರಾಯ ಕೆ. ರಾಮಯ್ಯ, ಶಿವಾಜಿ ಗಣೇಶನ್, ರುದ್ರಸ್ವಾಮಿ, ಲಕ್ಷ್ಮೀಪತಿ ಕೋಲಾರ, ಮಂಗಳೂರು ವಿಜಯ, ಹುಲ್ಕೆರೆ ಮಹಾದೇವ, ಬಾಬು ಬಂಡಾರಿಗಲ್, ಕೆ. ದೊರೆರಾಜ್, ಸಿ. ಬಸವಲಿಂಗಯ್ಯ, ಎನ್. ಜನಾರ್ಧನ್, ಕುಪ್ಪೆ ನಾಗರಾಜ್ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ. ಸಮಾವೇಶಕ್ಕೂ ಮುನ್ನ ಬೆಂಗಳೂರಿನಲ್ಲಿ ಬೃಹತ್ ಮೆರವಣಿಗೆ ನಡೆಸಲಾಗುವುದು ಎಂದರು.